ಬೆಂಗಳೂರು: 2018ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸಂಘಟನೆ ಮಾಡಿದವರಿಗಷ್ಟೆ ಟಿಕೆಟ್ ನೀಡಲಾಗುವುದು ಎಂದು ಹೇಳುವ ಮೂಲಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಲಿ ಶಾಸಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ನಡೆದ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ ಅವರು ಶಾಸಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.
Advertisement
ರಾಜ್ಯದಲ್ಲಿ ಪಕ್ಷ ಸಂಘಟನೆ ಕಾರ್ಯ ಕುಂಠಿತವಾಗಿದೆ. ಕಾಂಗ್ರೆಸ್ ಶಾಸಕರು ಇರುವ ಸ್ಥಳದಲ್ಲೇ ಪಕ್ಷ ಸಂಘಟನೆಗೆ ಹಿನ್ನಡೆಯಾಗಿದೆ. ಸದ್ಯ ಪಕ್ಷ ಸಂಘಟೆನಯಲ್ಲಿ ವಿಫಲರಾಗಿರುವ ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದು ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ನಿಷ್ಠೆಯಿಂದ ಪಕ್ಷ ಸಂಘಟನೆ ಮಾಡಿರುವ ಶಾಸಕರಿಗೆ ಮಾತ್ರ ಟಿಕೆಟ್ ನೀಡಲಾಗುವುದು ಎಂದು ಹೇಳಿ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ಮುಂದಿನ ಸಿಎಂ ಯಾರು ಎನ್ನುವ ವಿಚಾರದ ಬಗ್ಗೆ ಚರ್ಚೆ ನಡೆದಿದ್ದು ಈ ವೇಳೆ ಸಿಎಂ ಯಾರು ಅನ್ನೋ ವಿಚಾರ ವಿವಾದ ಮಾಡುವುದು ಬೇಡ. 2018ರ ಚುನಾವಣೆಯಲ್ಲಿ ತೀರ್ಮಾನವಾಗುತ್ತದೆ. ಈ ವಿಚಾರವಾಗಿ ಯಾರು ಬಹಿರಂಗವಾಗಿ ಹೇಳಿಕೆ ನೀಡಬೇಡಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
Advertisement
Advertisement
ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ವಿಫಲ ಅನ್ನೋದೆಲ್ಲಾ ಸುಳ್ಳು. ಉತ್ತಮವಾಗಿ ನಡೆಯುತ್ತಿದೆ. ಕಾರ್ಯಕ್ರಮವನ್ನು ಮತ್ತಷ್ಟು ಚುರುಕುಗೊಳಿಸುವಂತೆ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರಿಗೆ ಹಾಗೂ ಮುಖಂಡರಿಗೆ ಸೂಚನೆ ಕೊಟ್ಟ ವೇಣುಗೋಪಾಲ್ ಮುಂದಿನ ಚುನಾವಣೆ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಬೇಕು ಅಂತಾ ಹೈಕಮಾಂಡ್ ಹೇಳಿದೆ. ಆದರೆ ಮುಂದಿನ ಸಿಎಂ ಯಾರು ಎನ್ನುವುದನ್ನು ಹೈಕಮಾಂಡ್ ಮುಂದೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಸೋಷಿಯಲ್ ಮೀಡಿಯಾದಲ್ಲಿ ಭಾಗಿಯಾಗದೇ ಇರುವವರ ಬಗ್ಗೆ ಮಾತನಾಡಿದ ಅವರು, ಎಲ್ಲವನ್ನೂ ನೀವೇ ಮಾಡಲ್ಲ. ನಿಮಗೂ ಪಿಎ ಗಳಿದ್ದಾರೆ ಅಲ್ವಾ? ಅವರ ಕೈಲಿ ಮಾಡಿಸಿ. ಇಲ್ಲದೇ ಇದ್ದರೆ ಬೇರೆಯವರಿಗೆ ಕೊಟ್ಟು ಕೆಲಸ ಮಾಡಿಸಿ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಸಕ್ರೀಯರಾಗಿರಬೇಕು. ಜೊತೆಗೆ ಬೂತ್ ಕಮಿಟಿ ವರದಿಯನ್ನು ಆದಷ್ಟು ಬೇಗ ನೀಡುವಂತೆ ಕೆ.ಸಿ.ವೇಣುಗೋಪಾಲ್ ಮುಖಂಡರಿಗೆ ಹಾಗೂ ಶಾಸಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಸಚಿವೆಯಾಗಿ ಉಮಾಶ್ರೀ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿಲ್ಲ ಎಂಬುದು ಕೇಳಿ ಬಂದಿದೆ. ಬಳಿಕ ಸೋಷಿಯಲ್ ಮೀಡಿಯಾದ ಮಹತ್ವದ ಬಗ್ಗೆ ಕೆಲ ಹೊತ್ತು ಸಚಿವೆ ಉಮಾಶ್ರೀಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಜೊತೆಗೆ ಸಕ್ರಿಯಗೊಂಡಿದ್ದ 38 ಶಾಸಕರಿಗೆ ವೇಣುಗೋಪಾಲ್ ಅಭಿನಂದಿಸಿದರು ಎಂದು ಮೂಲಗಳು ತಿಳಿಸಿವೆ.