ಪ್ರೀತಿ ಉಳಿಸಿಕೊಂಡು ಜನರ ನಿರೀಕ್ಷೆಯಂತೆ ಕೆಲಸ ಮಾಡ್ತಿದ್ರೆ ಹೀಗಾಗ್ತಿರಲಿಲ್ಲ- ಚಲುವರಾಯಸ್ವಾಮಿ

Public TV
2 Min Read
mnd

ಮಂಡ್ಯ: ಜಿಲ್ಲೆಯ ಜನರು ಕೊಟ್ಟ ಪ್ರೀತಿಯನ್ನು ಉಳಿಸಿಕೊಳ್ಳಲಿಲ್ಲ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಮಂಡ್ಯ ಫಲಿತಾಂಶದ ಬಗ್ಗೆ ಕಾಂಗ್ರೆಸ್ ನಾಯಕ ಎನ್ ಚಲುವರಾಯಸ್ವಾಮಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಜನ ಪ್ರಬುದ್ಧರಿದ್ದಾರೆ. ಯಾವ ಸಂದರ್ಭದಲ್ಲೂ ವ್ಯಕ್ತಿ, ಗಾಸಿಪ್‍ಗೆ ಹೆಚ್ಚು ಸಮಯ ಕೊಡಲ್ಲ. ಪ್ರೀತಿ ಕೊಡ್ತಾರೆ, ವಾಪಸ್ ಕೂಡ ಪಡೀತಾರೆ. ಕುಮಾರಸ್ವಾಮಿ ಅವರನ್ನ ಸಿಎಂ ಮಾಡಲು ಜನ ಅಂದು ನಿರ್ಧರಿಸಿದ್ದರು. ಹೀಗಾಗಿ ನಮ್ಮನ್ನ ತಿರಸ್ಕರಿಸಿ ಅವರಿಗೆ ವೋಟ್ ಕೊಟ್ಟಿದ್ದರು. ಅವತ್ತು ಇಷ್ಟಪಟ್ಟು ಜನ ಹೆಚ್‍ಡಿಕೆಗೆ ಮತ ಕೊಟ್ಟರು. ಈಗ ಅವರನ್ನೂ ತಿರಸ್ಕರಿಸಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಸಚಿವ ಪುಟ್ಟರಾಜು ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೇ 23ಕ್ಕೆ ಉತ್ತರ ಕೊಡ್ತೀನಿ ಅಂದಿದ್ದರು. ಉತ್ತರ ಕೊಟ್ಟಿದ್ದಾರ ಎಂದು ಪ್ರಶ್ನಿಸಿದ ಅವರು, ಅವರ ರಾಜೀನಾಮೆ ನಾನು ಕೇಳಲ್ಲ. ಅವರ ರೀತಿ ನಾನು ಮಾತಾಡಲ್ಲ ಎಂದು ತಿಳಿಸಿದರು.

HDK 2

ಮತ್ತೆ ಸರ್ಕಾರದ ನಡೆ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿದ ಚಲುವರಾಯಸ್ವಾಮಿ, ಫಲಿತಾಂಶದ ಹಿನ್ನೆಲೆಯಲ್ಲಿ ತಗ್ಗಿ ಬಗ್ಗಿ ಹೋಗಬೇಕು. ದ್ವೇಷದ ರಾಜಕಾರಣ ಬಿಡಬೇಕು. ಆದರೆ ಮಂಡ್ಯ ಚುನಾವಣೆ ವಿಚಾರದಲ್ಲಿ ಅದು ಆಗಿಲ್ಲ. ಮನ್ಮುಲ್ ಬೋರ್ಡ್‍ನಲ್ಲಿದ್ದ ನಮ್ಮವರನ್ನು ಅಮಾನತು ಮಾಡಿದ್ದಾರೆ. ದ್ವೇಷದ ರಾಜಕಾರಣ ಇವರಿಗೆ ಗೌರವ ತರುತ್ತಾ ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು.

ಇಲ್ಲಿಯವರೆಗೆ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಕಾಂಗ್ರೆಸ್ ಮುಖಂಡರು ಕಾನೂನು ಬದ್ಧವಾಗಿ ನಡೆಸುತ್ತಿರುವ ಕ್ಲಬ್ ಮೇಲೆ ಭಾನುವಾರ ಮದ್ದೂರಿನಲ್ಲಿ ದಾಳಿ ಮಾಡಿದ್ದಾರೆ. ಮಂಡ್ಯ ಎಸ್‍ಪಿ ಇದೇ ಸರ್ಕಾರ 50 ವರ್ಷ ಇರುತ್ತೆ ಅಂದುಕೊಂಡು ಈ ರೀತಿ ಮಾಡುತ್ತಿದ್ದಾರೆ. ಇದಕ್ಕೆ ಜೆಡಿಎಸ್ ಶಾಸಕರು ಮುಖಂಡರ ಸೂಚನೆಯಿದೆ. ಹೀಗೆ ಮುಂದುವರಿದರೆ ನಾವು ಸುಮ್ಮನಿರಲ್ಲ. ನಾವು ಬೀದಿಗೆ ಇಳಿಯಬೇಕಾಗುತ್ತದೆ. ಜನತಾದಳದವರೇ ಮೈತ್ರಿ ಬೇಡ ಅಂತಿದ್ದಾರೆ. ನಾನು ಇತಿಮಿತಿಯಲ್ಲಿ ಮಾತನಾಡಿದರೆ ಸತ್ಯ ಹೊರಗಡೆ ಬರದೆ ಇರಲು ಸಾಧ್ಯವಿಲ್ಲ ಎಂದರು.

vlcsnap 2019 03 29 14h36m39s213 e1553850607887

ಪರೋಕ್ಷವಾಗಿ ಮೈತ್ರಿ ಬಗ್ಗೆ ವಿರೋಧ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದು ಮೈತ್ರಿ ಬಗ್ಗೆ ಪಕ್ಷದ ಮುಖಂಡರು ತೀರ್ಮಾನ ತೆಗೆದುಕೊಳ್ಳುತ್ತಾರೆ. ರಾಜ್ಯದ ವರಿಷ್ಠರಿಗೆ ಎಲ್ಲ ಗೊತ್ತಿದೆ. ಲೋಕಸಭಾ ಚುನಾವಣೆ ಇದ್ದ ಕಾರಣ ಸುಮ್ಮನಿದ್ದರು. ಈಗ ಚುನಾವಣೆ ಮುಗಿದಿದೆ. ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಜಿಲ್ಲೆಯ ಬೆಳವಣಿಗೆ ಬಗ್ಗೆ ಮಾತನಾಡುತ್ತೇನೆ. ಸುಮಲತಾ ಪರ ಓಡಾಡಿದ್ದಾರೆ ಎಂದು ಉಚ್ಛಾಟನೆ ಆದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಈ ಬಗ್ಗೆ ಪಕ್ಷದ ವರಿಷ್ಠರ ಜೊತೆಯೂ ಮಾತನಾಡಿದ್ದೇನೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *