Connect with us

Latest

ಐಸಿಜೆಯಲ್ಲಿ ಭಾರತದ ಪರ ವಾದಕ್ಕೆ ಪಾಕ್ ವಕೀಲ ಖವರ್ ಖುರೇಷಿಗೆ ಮಣೆ ಹಾಕಿದ್ದ ಯುಪಿಎ

Published

on

– ಕಾಂಗ್ರೆಸ್ಸಿಗೆ ಮೇಕ್ ಇನ್ ಇಂಡಿಯಾ ವಕೀಲರು ಬೇಡ, ಮೇಡ್ ಇನ್ ಪಾಕ್ ವಕೀಲರು ಬೇಕು
– ವೃತ್ತಿರಪರರನ್ನು ನೇಮಿಸುವುದಕ್ಕೆ ಯಾವುದೇ ಗಡಿ ಇಲ್ಲ ಎಂದ ಕಾಂಗ್ರೆಸ್

ನವದೆಹಲಿ: ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆ ಪ್ರಕರಣದಲ್ಲಿ ಪಾಕ್ ಪರ ವಾದಿಸಿದ ವಕೀಲ ಖವರ್ ಖುರೇಶಿ ಅವರು 17 ವರ್ಷಗಳ ಹಿಂದೆ ನೆದರ್‍ಲ್ಯಾಂಡಿನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ(ಐಸಿಜೆ) ಭಾರತವನ್ನು ಪ್ರತಿನಿಧಿಸಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

2004ರ ದಾಭೋಲ್ ಪವರ್ ಪ್ರಾಜೆಕ್ಟ್ ಕೇಸ್‍ನಲ್ಲಿ ಭಾರತದ ಪರ ಅಂತಾರಾಷ್ಟ್ರೀಯ ಕೋರ್ಟ್ ನಲ್ಲಿ ಖವರ್ ಖುರೇಷಿ ವಾದಿಸಿದ್ದರು. ಇದೀಗ ಆ ವಿಚಾರವನ್ನು ಬಿಜೆಪಿ ಎತ್ತಿಕೊಂಡು ಕಾಂಗ್ರೆಸ್ ನಡೆಯನ್ನು ಪ್ರಶ್ನಿಸಿ ಟೀಕಿಸಿದ್ದು ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದೆ.

ಏನಿದು ಪ್ರಕರಣ?
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿರುವ ಅಮೆರಿಕ ಮೂಲದ ಎನ್‍ರೋನ್ ಕಂಪೆನಿ ಒಡೆತನದ ದಾಭೋಲ್ ಪವರ್ ಪ್ರಾಜೆಕ್ಟ್ ನಲ್ಲಿ 2001ರಲ್ಲಿ ಲೆಕ್ಕಪತ್ರ ಹಗರಣ ಸದ್ದು ಮಾಡಿತ್ತು. ಕೊನೆಗೆ ಕಂಪೆನಿ ಮಾಲೀಕರು ಹಾಗೂ ಮಹಾರಾಷ್ಟ್ರ ಸರ್ಕಾರದ ಮಧ್ಯೆ ವಿವಾದ ಉಂಟಾಗಿತ್ತು. ಬಳಿಕ ಭಾರತ ಸರ್ಕಾರ ಮಧ್ಯಸ್ಥಿಕೆ ವಹಿಸಿತ್ತು. ಆಗ 6 ಬಿಲಿಯನ್ ಡಾಲರ್ ನೀಡುವಂತೆ ಎನ್‍ರೋನ್ ಕಂಪೆನಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. 2004ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಏರಿದ ಬಳಿಕ ದಾಭೋಲ್ ಕೇಸಿಗೆ ಸಂಬಂಧಿಸಿದ ಸಂಪೂರ್ಣ ಕಾನೂನು ತಂಡವನ್ನು ಬದಲಾಯಿಸಿತ್ತು. ದೇಶದ ವಕೀಲರನ್ನು ಕಡೆಗಣಿಸಿ ಖವರ್ ಖುರೇಷಿ ಅವರನ್ನು ಭಾರತ ಪರವಾಗಿ ಐಸಿಜೆಯಲ್ಲಿ ಪ್ರತಿನಿಧಿಸಿ, ವಾದಿಸುವುದಕ್ಕೆ ನೇಮಕ ಮಾಡಿತ್ತು.

ಕೇಸ್ ಏನಾಯ್ತು?
ಕೇಸ್‍ನಲ್ಲಿ ಭಾರತದ ಪರ ವಾದಿಸಿದ್ದ ಖುರೇಷಿ ಸೋತಿದ್ದರು. ಕೊನೆಗೆ ಆ ಕೇಸನ್ನು ಆರ್ಬಿಟ್ರೇಶನ್ (ರಾಜಿ ಪಂಚಾತಿಕೆ) ಮೂಲಕ ಇತ್ಯರ್ಥಪಡಿಸಲಾಗಿತ್ತು.

ಮರು ಜೀವ ಬಂದಿದ್ದು ಹೇಗೆ?
ಭಾರತದ ಪರವಾಗಿ ಐಸಿಜೆಯಲ್ಲಿ ವಾದಿಸಲು ವಕೀಲ ಖವರ್ ಖುರೇಷಿ ಅವರನ್ನು ಯುಪಿಎ ಸರ್ಕಾರಕ್ಕೆ ಫಾಕ್ಸ್ ಮ್ಯಾಂಡಲ್ ಎನ್ನುವ ಸಂಸ್ಥೆ ಎಂದು ವಯಾನ್ ನ್ಯೂಸ್ ಬಹಿರಂಗ ಪಡಿಸಿದ್ದು ಈ ಪ್ರಕರಣ ಈಗ ಮರು ಜೀವ ಪಡೆದುಕೊಂಡಿದೆ.

ಬಿಜೆಪಿಯ ಪ್ರಶ್ನೆ ಏನು?
ದಾಭೋಲ್ ಪ್ರಾಜೆಕ್ಟ್ ಕೇಸಲ್ಲಿ ಹರೀಶ್ ಸಾಳ್ವೆ ಬದಲಿಗೆ, ಖುರೇಷಿಯನ್ನು ನೇಮಕ ಮಾಡಿದ್ದು ಯಾಕೆ? ನಿಮಗೆ ಪಾಕ್‍ನ ವಕೀಲರ ಮೇಲೆ ಯಾಕಷ್ಟು ನಂಬಿಕೆ ಎಂದು ಪ್ರಶ್ನಿಸಿದೆ. ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಪ್ರತಿಕ್ರಿಯಿಸಿ, ಕಾಂಗ್ರೆಸ್ ಯಾವಾಗಲೂ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಾ ಬಂದಿದೆ. ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗಲೂ ಅವರು ಭಾರತೀಯ ಸೇನೆಯನ್ನು ಪ್ರಶ್ನಿಸಿದರು. ಈಗ ಮತ್ತೊಮ್ಮೆ ಅವರ ಪಾಕಿಸ್ತಾನದ ಪರ ನಿಲುವು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

ಯಾಕೆ ಭಾರತೀಯ ವಕೀಲರು ಅಂದು ಸಿಕ್ಕಿಲ್ಲವೇ ಎಂದು ಕೇಳಿದ್ದಕ್ಕೆ ಅವರು, ಮಾಜಿ ಸಚಿವರಾದ ಸಲ್ಮಾನ್ ಖುರ್ಷಿದ್ ಮತ್ತು ಮಣಿ ಶಂಕರ್ ಅಯ್ಯರ್ ಅವರು ಪಾಕ್ ವಕೀಲರ ನೇಮಕದಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಕಾಂಗ್ರೆಸ್ಸಿಗೆ ಮೇಕ್ ಇನ್ ಇಂಡಿಯಾದ ಬಗ್ಗೆ ಒಲವು ಇಲ್ಲ. ಹೀಗಾಗಿ ‘ಮೇಕ್ ಇನ್ ಇಂಡಿಯಾ’ದ ವಕೀಲರನ್ನು ನಿರ್ಲಕ್ಷಿಸಿ ‘ಮೇಡ್ ಇನ್ ಪಾಕಿಸ್ತಾನ’ ವಕೀಲರನ್ನು ನೇಮಿಸಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸ್ಪಷ್ಟನೆ ಏನು?
ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, ಪಾಕ್ ಮೂಲದ ಖವರ್ ಖುರೇಷಿ ಒಬ್ಬ ಸ್ವತಂತ್ರ ಬ್ಯಾರಿಸ್ಟರ್. ವೃತ್ತಿರಪರರನ್ನು ನೇಮಿಸೋದಕ್ಕೆ ಯಾವುದೇ ಗಡಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಪಾಕಿಸ್ತಾನದಲ್ಲೇ ವಿರೋಧ:
ನೌಕಾಪಡೆಯ ಮಾಜಿ ಅಧಿಕಾರಿ, 46ರ ಹರೆಯದ ಕುಲಭೂಷಣ್ ವಿರುದ್ಧದ ಪ್ರಕರಣದಲ್ಲಿ ಐಸಿಜೆ ಭಾರತದ ಪರವಾಗಿ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ವಿಶ್ವ ಮಟ್ಟದಲ್ಲಿ ಪಾಕ್ ಮಾನ ಹರಾಜು ಆಗಲು ಖವರ್ ಖುರೇಷಿಯ ಅಸಮರ್ಥ ವಾದ ಮಂಡನೆಯೇ ಕಾರಣ. ಅವರು ಸರಿಯಾಗಿ ವಾದವನ್ನು ಮಂಡಿಸಲಿಲ್ಲ ಎಂದು ಪಾಕ್ ಮಾಧ್ಯಮಗಳು ಅವರನ್ನು ಟೀಕಿಸಿವೆ.

Click to comment

Leave a Reply

Your email address will not be published. Required fields are marked *