-ನಮ್ಮ ಮಾತಿಗೆ ಬೆಲೆ ಇಲ್ವಾ? ಕಾಂಗ್ರೆಸ್ ಶಾಸಕರ ಅಸಮಾಧಾನ?
ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಚಿವರು ಮತ್ತು ನಾಯಕರು ನಮ್ಮಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಮೇಲ್ನೋಟಕ್ಕೆ ಹೇಳುತ್ತಿದ್ದರೂ, ಶಾಸಕರು ಪಕ್ಷದ ಮುಖಂಡರ ಮುಂದೆ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಚಿವ ಹೆಚ್.ಡಿ.ರೇವಣ್ಣ ಅವರ ರಾಜಕೀಯ ಲೆಕ್ಕಾಚಾರದ ವಿರುದ್ಧ ಕಾಂಗ್ರೆಸ್ ಶಾಸಕರು ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಎದುರು ದೂರಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭಿಸಿದೆ.
ಯಾಕೆ ಈ ಮುನಿಸು?:
ಐಎಎಸ್ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಕಾಂಗ್ರೆಸ್ ನ ಸಚಿವರು, ಶಾಸಕರು ಹಾಗೂ ಸಂಸದರು ಸಿದ್ದರಾಮಯ್ಯ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರಂತೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಾಲಯ್ಯರನ್ನ ವರ್ಗಾಯಿಸಿ ಅವರ ಸ್ಥಾನಕ್ಕೆ ಸಿಎಂ ಕುಮಾರಸ್ವಾಮಿ ಅವರ ಆಪ್ತ ಕರಿಗೌಡರನ್ನ ನೇಮಿಸಲಾಗಿದೆ. ಸಿಎಂ ತಮ್ಮ ಆಪ್ತ ಕರಿಗೌಡರಿಗೆ ಅವಕಾಶ ಕಲ್ಪಿಸಲು ಪಾಲಯ್ಯರನ್ನ ವರ್ಗಾವಣೆ ಮಾಡಲಾಗಿದೆ ಎಂದು ಸಂಸದ ವೀರಪ್ಪ ಮೊಯ್ಲಿ ಹಾಗೂ ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್ ಆಕ್ರೋಶ ಹೊರಹಾಕಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
Advertisement
Advertisement
ಇನ್ನೊಂದೆಡೆ ಕೆಎಎಸ್ ನಿಂದ ಐಎಎಸ್ ಗೆ ಇತ್ತೀಚೆಗಷ್ಟೆ ಪದೋನ್ನತಿ ಹೊಂದಿದ ಕರಿ ಗೌಡರನ್ನು ಅರ್ಹತೆ ಮೀರಿ ಮುಖ್ಯಮಂತ್ರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿ ನೇಮಿಸಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ. ಇತ್ತ ಕಾಂಗ್ರೆಸ್ ಸಚಿವರೊಬ್ಬರು ತಮ್ಮ ಇಲಾಖೆಗೆ ತಾವು ಹೇಳಿದ ಅಧಿಕಾರಿಯನ್ನು ನೇಮಿಸಿಲ್ಲ ಅಂತಾ ಸಿಟ್ಟು ಮಾಡಿಕೊಂಡಿದ್ದಾರಂತೆ. ಕೊಳಚೆ ನಿರ್ಮೂಲನಾ ಮಂಡಳಿ ಆಯುಕ್ತರನ್ನಾಗಿ ಸತೀಶ್ ಅವರನ್ನು ನೇಮಕ ಮಾಡಿದ್ದರಿಂದ ತಾವು ಹೇಳಿದವರನ್ನು ನೇಮಿಸಿಲ್ಲ ಎಂದು ಸಚಿವ ಯು.ಟಿ.ಖಾದರ್ ಕೂಡ ಅಸಮಧಾನ ಹೊರ ಹಾಕಿದ್ದಾರೆ ಎನ್ನಲಾಗುತ್ತಿದೆ.
Advertisement
ಅಧಿಕಾರಿಗಳ ವರ್ಗಾವಣೆಯ ವಿಷಯದಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಸಚಿವರ ಸಲಹೆ ಪಡೆಯದೇ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ. ಇದೇ ವಿಷಯ ದೋಸ್ತಿ ಸರ್ಕಾರದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ದೋಸ್ತಿ ಕುಸ್ತಿಗೆ ವೇದಿಕೆ ಸಿದ್ಧವಾಗುತ್ತಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.