ಬೆಂಗಳೂರು: ಬಿಜೆಪಿ ವಿರುದ್ಧ ಸಿಎಂ ಕರೆ ಕೊಟ್ಟ ದಂಗೆ ಹೇಳಿಕೆಗೆ ಕಾಂಗ್ರೆಸ್ ನಾಯಕರಿಂದಲೇ ಈಗ ಅಸಮಾಧಾನ ವ್ಯಕ್ತವಾಗಿದೆ.
ಸಿಎಂ ಸ್ಥಾನದಲ್ಲಿದ್ದುಕೊಂಡು ಈ ಹೇಳಿಕೆ ಸರಿಯಲ್ಲ. ಸಿಎಂ ಎಚ್ಚರಿಕೆಯಿಂದ ಮಾತನಾಡಬೇಕು. ಕುಮಾರಸ್ವಾಮಿ ದಂಗೆ ಪದ ಒಪ್ಪುವಂತಹದ್ದಲ್ಲ. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳದಿದ್ದರೆ ಹೀಗಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಸಿಕ್ಕಿದೆ.
ಗುರುವಾರದ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆಗೆ ನಿಗದಿಯಾಗಿದ್ದ ವಿಚಾರಕ್ಕಿಂತ ಹೆಚ್ಚಾಗಿ ಸಿಎಂ ದಂಗೆ ಕುರಿತ ಹೇಳಿಕೆಯ ಬಗ್ಗೆ ಚರ್ಚೆ ನಡೆದಿದೆ. ವಿರೋಧ ಪಕ್ಷದವರು ಏನೇ ಹೇಳಿದರೂ ಸಂಯಮ ಕಳೆದುಕೊಳ್ಳಬಾರದು. ಕಾನೂನು, ಸುವ್ಯವಸ್ಥೆ ಕಾಪಾಡಬೇಕಾದ ಜವಾಬ್ದಾರಿ ಸರ್ಕಾರದ್ದು ಅದು ಬಿಟ್ಟು ಉದ್ವೇಗಕ್ಕೆ ಒಳಗಾಗಿ ಮಾತನಾಡಬಾರದು. ಪ್ರತಿಯೊಂದಕ್ಕೂ ಪ್ರತಿಕ್ರಿಯೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅನಗತ್ಯ ಹೇಳಿಕೆಗಳಿಗೆ ಬ್ರೇಕ್ ಹಾಕದಿದ್ದಲ್ಲಿ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕರು ನೇರವಾಗಿಯೇ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಹೇಳಿದ್ದು ಏನು?
ಜನಪರ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿರುವ ಬಿಜೆಪಿ ವಿರುದ್ಧ ನಾಡಿನ ಜನತೆ ದಂಗೆ ಏಳಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದರು. ಗುರುವಾರ ಚನ್ನರಾಯಪಟ್ಟಣ ತಾಲೂಕಿನ ತೋಟಿ ಗ್ರಾಮದಲ್ಲಿ ಮಾತನಾಡಿದ್ದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಜನಪರ ಸರ್ಕಾರವನ್ನು ಉರುಳಿಸಲು ಬಿಜೆಪಿಯವರು ಮುಂದಾಗಿದ್ದಾರೆ. ಇಂತವರ ವಿರುದ್ಧ ನಾಡಿನ ಜನ ದಂಗೆ ಏಳಬೇಕು. ಈ ನಾಡಿನ ಜನರಿಗೆ ಈ ಪುಣ್ಯ ಭೂಮಿಯಿಂದಲೇ ನಾನು ದಂಗೆಗೆ ಕರೆ ನೀಡುತ್ತೇನೆ ಎಂದು ಹೇಳಿದ್ದರು.
ದಂಗೆ ವಿಚಾರವಾಗಿ ಸಿಎಂ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಭಾವನಾತ್ಮಕವಾಗಿ ಸಿಎಂ ಹಾಗೆ ಹೇಳಿರಬಹುದು. ಇದನ್ನು ಹೆಚ್ಚು ಬೆಳೆಸುವುದು ಬೇಡ. ಅವರಿಗೆ ಬಿಜೆಪಿಯವರು ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv