ಬೆಂಗಳೂರು: ಅನರ್ಹತೆ ನಮಗೆ ತಿಳಿದಿರುವ ವಿಷಯವೇ, ಕಾಂಗ್ರೆಸ್ ನಾಯಕರು ನಮಗೆ ಮೊದಲೇ ಈ ಬಗ್ಗೆ ತಿಳಿಸಿದ್ದರು. ಅನರ್ಹತೆಯ ಶಿಕ್ಷಯನ್ನೇ ನೀಡುತ್ತೇವೆಂದು ಮೊದಲೇ ಬರೆದು ಬಿಟ್ಟಿದ್ದರು. ಅದು ಇವತ್ತು ಆಗಿದೆ ಅಷ್ಟೇ, ಹೀಗಾಗಿ ನಮಗೆ ಸ್ಪೀಕರ್ ಅನರ್ಹತೆ ನಿರ್ಧಾರ ಆಶ್ಚರ್ಯ ಎನ್ನಿಸುತ್ತಿಲ್ಲ ಎಂದು ರೆಬೆಲ್ ಶಾಸಕ ಮುನಿರತ್ನ ಹೇಳಿದ್ದಾರೆ.
ಸ್ಪೀಕರ್ ಅನರ್ಹತೆ ನಿರ್ಧಾರದ ಕುರಿತು ಪಬ್ಲಿಕ್ ಟಿವಿ ಜೊತೆ ಮುಂಬೈನಿಂದ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಕೇವಲ ಮೇಲ್ನೋಟಕ್ಕೆ ನೀವು ರಾಜೀನಾಮೆ ನೀಡಿ ಹೋದರೆ, ಅನರ್ಹ ಮಾಡುತ್ತೇವೆ. ನಿಮ್ಮನ್ನು ಬಿಡಲ್ಲ ಎಂದು ಹೇಳಿದ್ದಾರೆ. ಇದು ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ, ದೇವೇಗೌಡರನ್ನು ಮೆಚ್ಚಿಸಲು ಮಾಡಿದ ಕೆಲಸ. ಮೈತ್ರಿ ಸರ್ಕಾರ ರಚನೆಯಾದ ಮೂರು ತಿಂಗಳಿಂದಲೇ ಬೀಳಿಸುವ ಕೆಲಸ ಪ್ರಾರಂಭವಾಗಿತ್ತು. ಈ ಹಿಂದೆ ದೇವೇಗೌಡರು ರಾಹುಲ್ ಗಾಂಧಿ ಅವರಿಗೆ ಯಾಕೆ ದೂರು ನೀಡಿದ್ದು, ಕುಮಾರಸ್ವಾಮಿ ಅವರು ನೆಮ್ಮದಿಯಿಂದ ಆಡಳಿತ ನಡೆಸಲು ಬಿಟ್ಟಿಲ್ಲ. ಒಂದೆಡೆ ಬಳ್ಳಾರಿಯವರು. ಇನ್ನೊಂದೆಡೆ ಕೋಲಾರದವರು ಓಡಿ ಹೋಗುತ್ತಾರೆ. ಹೀಗೆ ಬರೀ ಓಡಿ ಹೋಗುವವರನ್ನು ಹಿಡಿದು ತಂದು ಸಮಾಧಾನ ಮಾಡುವುದೇ ಕುಮಾರಸ್ವಾಮಿಯವರ ಕೆಲಸವಾಗಿತ್ತು ಎಂದು ಹರಿಹಾಯ್ದರು.
Advertisement
Advertisement
ಮೊದಲನೇಯದು ಇವರಿಬ್ಬರು ಮೈತ್ರಿ ಸರ್ಕಾರ ರಚಿಸಿದ್ದೇ ತಪ್ಪು. ಐದು ವರ್ಷ ಮುಖ್ಯಮಂತ್ರಿ ನೀವೆ ಎಂದು ಹೇಳಿದಾಗ ಕಾಂಗ್ರೆಸ್‍ನವರು ವಿಶ್ವಾಸದಿಂದ ಈ ಮಾತನ್ನು ಹೇಳುತ್ತಿದ್ದಾರಾ ಎಂದು ಜೆಡಿಎಸ್‍ನವರು ಯೋಚಿಸಬೆಕಿತ್ತು. ಕಾಂಗ್ರೆಸ್‍ನವರು ಬಂದರೆಂದು ಇವರು ಆತುರದಿಂದ ನಿರ್ಧಾರ ತೆಗೆದುಕೊಂಡರು. ಸರಿ ಎಂದು ಇವರು ಸುಮ್ಮನಾದರು. ಆದರೆ, ಮೂರು ತಿಂಗಳ ನಂತರ ಸರ್ಕಾರ ಕೆಡವಲು ಪ್ರಯತ್ನ ಶುರುವಾಗಿತ್ತು ಎಂದು ಗುಟ್ಟನ್ನು ಬಿಚ್ಚಿಟ್ಟರು.
Advertisement
ಸುದ್ದಿಗೋಷ್ಠಿ ನಡೆಸ್ತೀವಿ: ಈ ಪ್ರಯತ್ನವನ್ನು ಎಳೆದುಕೊಂಡು ಬಂದು ಲೋಕಸಭಾ ಚುನಾವಣೆಯವರೆಗೆ ತಂದರು. ಲೋಕಸಭಾ ಚುನಾವಣೆ ನಂತರ ಸರ್ಕಾರ ಕೆಡವಲೇಬೇಕೆಂದು ಸಾಕಷ್ಟು ಸಾರಿ ಕಾಂಗ್ರೆಸ್ ನಾಯಕರೇ ಸಭೆ ನಡೆಸಿದ್ದಾರೆ. ಕುಮಾರಸ್ವಾಮಿಯವರನ್ನು ತೆಗೆಯಬೇಕೆಂದು ಪ್ರಯತ್ನ ಮಾಡಿದವರೇ ಕಾಂಗ್ರೆಸ್ ನಾಯಕರು. ಇದೀಗ ಕುಮಾರಸ್ವಾಮಿಯವರ ಮೇಲೆ ಪ್ರೀತಿ, ಅಭಿಮಾನ ಉಕ್ಕಿ ಹರಿಯುತ್ತಿದೆ. ಯಾವ ನಾಯಕರು ಕೆಡವಲು ಪ್ರಯತ್ನಿಸಿದ್ದಾರೆ ಎಂಬುದನ್ನು ಬೆಂಗಳೂರಿಗೆ ಆಗಮಿಸಿದಾಗ ಎಲ್ಲ ಅತೃಪ್ತ ಶಾಸಕರು ಸೇರಿ ಸುದ್ದಿಗೋಷ್ಠಿ ನಡೆಸಿ ಹೇಳುತ್ತೇವೆ ಎಂದರು.
Advertisement
ಮಾಧ್ಯಮಗಳ ಮುಂದೆ ಪ್ರೀತಿ: ನಾವು ರಾಜೀನಾಮೆ ನೀಡಲು ಪ್ರಚೋದಿಸಿದವು ಯಾರು, ನಾವು ತೆರಳಲು ಪ್ರಚೋದನೆ ನೀಡಿದ್ದೇ ಕಾಂಗ್ರೆಸ್ ನಾಯಕರು. ಇಲ್ಲವೆ ನಮಗೇನು ಹುಚ್ಚು ಹಿಡಿದಿತ್ತಾ, ನಮಗೆ ಸರ್ಕಾರದಲ್ಲಿ ಕೆಲಸ ಮಾಡಿ ಕೊಟ್ಟಿಲ್ಲ ಎಂಬ ಅಸಮಾಧಾನ ಇದ್ದದ್ದು ನಿಜ. ಇಲ್ಲೂ ನೆಮ್ಮದಿ ಇಲ್ಲ, ಅಲ್ಲೂ ಕೆಲಸ ಆಗುತ್ತಿರಲಿಲ್ಲ ಹೀಗಾಗಿ ಶಾಸಕರು ಬೇಸತ್ತಿದ್ದರು. ಅಲ್ಲದೆ, ಏನೇ ಮಾಡಿದ್ದರೂ ಸರ್ಕಾರ ಇನ್ನು ಎರಡು ತಿಂಗಳು ಸಹ ಇರುತ್ತಿರಲಿಲ್ಲ. ಇವರಿಬ್ಬರ ಮಧ್ಯದಲ್ಲಿ ನಾವೇಕೆ ಹಾಳಾಗಬೇಕಿತ್ತು. ಕನಿಷ್ಟ ಪಕ್ಷ ಸರ್ಕಾರ ರಚನೆಯಾಗಿದೆ ಎಂದು ಹೇಗೋ ಕೆಲಸ ಮಾಡಬಹದಿತ್ತು. ಆದರೆ, ದಿನವೂ ಇವರ ಜಗಳ, ಮುಸುಕಿನ ಗುದ್ದಾಟ. ಒಳಗಡೆ ಇಬ್ಬರಿಗೂ ದ್ವೇಷ ಇತ್ತು ಕೇವಲ ಮಾಧ್ಯಮದವರ ಮುಂದೆ ಪ್ರೀತಿ ತೋರಿಸುತ್ತಿದ್ದರು. ಇಬ್ಬರ ನಡುವೆ ಬೆಂಕಿ ಕಡ್ಡಿ ಗೀರಿದ್ದರೆ ಬೆಂಕಿ ಹೊತ್ತಿಕೊಳ್ಳುತ್ತಿತ್ತು ಅಷ್ಟು ದ್ವೇಷವಿತ್ತು. ಹೊರಗಡೆ ಮಾತ್ರ ಪ್ರೀತಿ ತೋರಿಸುತ್ತಿದ್ದರು ಎಂದು ಮೈತ್ರಿ ಸರ್ಕಾರದ ಮುಸುಕಿನ ಗುದ್ದಾಟದ ಕಹಾನಿಯನ್ನು ಬಿಚ್ಚಿಟ್ಟರು.
ಒಳಗೊಳಗೆ ಖುಷಿ: ಕಾಂಗ್ರೆಸ್ ನಾಯಕರು ಮೈತ್ರಿ ಸರ್ಕಾರವನ್ನು ತೆಗೆಯಬೇಕಿತ್ತು. ತಗೆದಾಗಿದೆ. ಇದನ್ನು ಈಗ ನಮ್ಮ ತಲೆಗೆ ಕಟ್ಟುತ್ತಿದ್ದಾರೆ. ಒಳಗೊಳಗೆ ಅವರಿಗೆ ಖುಷಿ ಇದೆ. ಈಗ ನಮ್ಮ ಮೇಲೆ ಕ್ರಮ ಜರುಗಿಸದಿದ್ದರೆ ಜನ ಬೇರೆ ರೀತಿ ಅರ್ಥೈಸುತ್ತಾರೆ. ಪ್ರಚೋದನೆ ಮಾಡಿ ಕಳುಹಿಸಿ, ನಮ್ಮ ಮೇಲೆ ಕ್ರಮ ಜರುಗಿಸಿ, ಅವರ ಮೇಲೆ ತಪ್ಪು ಬರದಂತೆ ನಾಟವಾಡಿದ್ದಾರೆ ಎಂದು ಹರಿಹಾಯ್ದರು.
ದೇವರ ಮೇಲೆ ನಂಬಿಕೆ ಇಟ್ಟಿದ್ದೇವೆ. ಕ್ಷೇತ್ರದಲ್ಲಿ ಕೆಲಸ ಮಾಡಿ ನಾವೆಲ್ಲ ಶಾಸಕರಾಗಿದ್ದೇವೆ. ಹೀಗಾಗಿ ಯಾರು ಕರೆದರೂ ಹೋಗುತ್ತೇವೆ. ನಾವು ರಾಜೀನಾಮೆ ನೀಡಲು ಕಾರಣಗಳೇನು? ಪ್ರಚೋದನೆ ನೀಡಿದವರರು ಯಾರು? ಬೆಳಗಾವಿಯಲ್ಲಿ ಮೊದಲು ಗಲಾಟೆ ಶುರುವಾಗಿತ್ತು. ಅದನ್ನು ಆಗಲೇ ಸ್ವಚ್ಛಗೊಳಿಸಿದ್ದರೆ ಎಲ್ಲವೂ ಸರಿ ಹೋಗುತಿತ್ತು. ಅಲ್ಲಿನ ಕಿಡಿ ಬೆಂಗಳೂರಿಗೆ ಆವರಿಸಿ ನಮ್ಮನ್ನು ಹೊರ ಹೋಗುವಂತೆ ಮಾಡಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮನ್ನು ಈಗ ಕೇಳುವವರು ಯಾರೂ ಇಲ್ಲ. ಆದರೂ ನಾವು ಸದ್ಯದಲ್ಲೇ ಬೆಂಗಳೂರಿಗೆ ಬರುತ್ತೇವೆ. ಬಂದು ನಮ್ಮ ಈ ಸ್ಥಿತಿಗೆ ಕಾರಣ ಯಾರು ಎಂಬುದನ್ನು ತಿಳಿಸುತ್ತೇವೆ ಎಂದರು.