ಧ್ರುವನಾರಾಯಣ್ ನಿಧನಕ್ಕೆ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರಿಂದ ಸಂತಾಪ

Public TV
3 Min Read
DHRUVA NARAYAN 1

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ (Dhruva Narayan) ನಿಧನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi), ರಣದೀಪ್ ಸಿಂಗ್ ಸುರ್ಜೇವಾಲಾ (Randeep Singh Surjewala), ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah)  ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಧ್ರುವನಾರಾಯಣ ನಿಧನದಿಂದ ತೀವ್ರ ದುಃಖ ಮತ್ತು ನೋವಾಗಿದೆ. ಅವರು ಕೇವಲ ತಳಮಟ್ಟದ ರಾಜಕೀಯ ವ್ಯಕ್ತಿಯಾಗಿರಲಿಲ್ಲ, ಅತ್ಯುತ್ತಮ ವ್ಯಕ್ತಿಯಾಗಿದ್ದರು. ಅವರ ನಿಧನವು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ನಷ್ಟವಲ್ಲ. ನನಗೂ ವೈಯಕ್ತಿಕವಾಗಿ ದೊಡ್ಡ ನಷ್ಟವಾಗಿದೆ ಎಂದು ಧ್ರುವನಾರಾಯಣ್‌ ನಿಧನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದರು.

ಕಾಂಗ್ರಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಮಾಜಿ ಸಂಸದ ಆರ್. ಧ್ರುವನಾರಾಯಣ್ ಹಠಾತ್ ನಿಧನದಿಂದ ದುಃಖವಾಗಿದೆ. ಕಷ್ಟಪಟ್ಟು ದುಡಿಯುವ ಮತ್ತು ತಳಮಟ್ಟದ ನಾಯಕ, NSUI ಮತ್ತು ಯೂತ್ ಕಾಂಗ್ರೆಸ್ ಮೂಲಕ ಬಂದ ಸಾಮಾಜಿಕ ನ್ಯಾಯದ ನಾಯಕರಾಗಿದ್ದರು. ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟವಾಗಿದ್ದು, ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ನನ್ನ ಆತ್ಮೀಯರಾದ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಾಜಿ ಸಂಸದ ಧ್ರುವನಾರಾಯಣ್ ಅವರ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿಕೋರುತ್ತೇನೆ.

ರಾಜಕೀಯ ನಾಯಕ ಮತ್ತು ಸಂಸದೀಯ ಪಟುವಾಗಿ ತನ್ನ ಶ್ರಮ, ಪ್ರಬುದ್ಧತೆ ಮತ್ತು ಬದ್ಧತೆಯಿಂದ ಅತ್ಯುನ್ನತ ಸ್ಥಾನಕ್ಕೇರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಧ್ರುವನಾರಾಯಣ್ ಅವರ ಬದುಕು ಅರ್ಧ ದಾರಿಯಲ್ಲಿಯೇ ಕೊನೆಗೊಂಡಿದ್ದು, ನಾಡಿಗೆ ಮತ್ತು ಜನತೆಗೆ ತುಂಬಲಾರದ ನಷ್ಟವಾಗಿದೆ. ಅವರ ಸಾಧನೆಯ ಬದುಕು ಶಾಶ್ವತವಾಗಿ ನಮ್ಮ ನೆನಪಲ್ಲಿರುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧ್ರುವನಾರಾಯಣ್‌ ನಿಧನ – ಪ್ರಜಾಧ್ವನಿ ಯಾತ್ರೆ ರದ್ದು

ರಣದೀಪ್ ಸಿಂಗ್ ಸುರ್ಜೆವಾಲಾ ಮಾತನಾಡಿ, ಸದಾ ನಗುಮುಖದ ಗೆಳೆಯ, ಕಾಂಗ್ರೆಸ್‌ ನಾಯಕ ಧ್ರುವನಾರಾಯಣ್ ಅವರ ನಿಧನದ ನಷ್ಟವನ್ನು ಯಾವುದೇ ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ಬಡವರ ಸೇವೆಗಾಗಿ ಸದಾ ದುಡಿಯುತ್ತಿದ್ದ ಅವರನ್ನು  ಶಾಶ್ವತವಾಗಿ ಕಳೆದುಕೊಳ್ಳುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಧ್ರುವನಾರಾಯಣ್ ಕಾರ್ಯಾಧ್ಯಕ್ಷ ಅಲ್ಲ, ನನ್ನ ಕುಟುಂಬವಾಗಿದ್ದರು: ಕಣ್ಣೀರು ಹಾಕಿದ ಡಿಕೆಶಿ

Share This Article
Leave a Comment

Leave a Reply

Your email address will not be published. Required fields are marked *