ಹುಬ್ಬಳ್ಳಿ: ಕುಂದಗೋಳ ಉಪಚುನಾವಣಾ ಮತದಾನಕ್ಕೆ ಮೂರು ದಿನಗಳು ಬಾಕಿ ಇರುವ ಸಂದರ್ಭದಲ್ಲೇ ಕ್ಷೇತ್ರದಲ್ಲಿ ರಾಜಕೀಯ ನಾಯಕರ ವಾಗ್ದಾಳಿ ಹೆಚ್ಚಾಗುತ್ತಿದೆ. ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರ ಬಳೆ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಡಿಕೆ ಶಿವಕುಮಾರ್ ಅವರು, ಶೋಭಕ್ಕ ಅವರು ಬಳೆ ಕಳಿಸಿ ಕೊಟ್ಟರೆ ಬಹಳ ಸಂತೋಷದಿಂದ ಹಾಕಿಕೊಳ್ಳುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಚಾರದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕುಂದಗೋಳ ಕ್ಷೇತ್ರದಲ್ಲಿ ಪಕ್ಷದ ಪ್ರತ್ಯೇಕ ಕಚೇರಿ ತೆರೆಯಲಿದ್ದೇವೆ. ಅದರ ಸಂಪೂರ್ಣ ಜವಾಬ್ದಾರಿ ನಾನೇ ವಹಿಸಿಕೊಳ್ಳಲಿದ್ದೇನೆ. ಕ್ಷೇತ್ರವನ್ನ ದತ್ತು ಪಡೆದುಕೊಳ್ಳುವ ಮೂಲಕ ಅಭಿವೃದ್ಧಿ ಪಡಿಸಲಿದ್ದೇವೆ. ಕುಂದಗೋಳ ಕ್ಷೇತ್ರವನ್ನ ನನ್ನ ಕ್ಷೇತ್ರ ಎಂದು ತಿಳಿದು ಅಭಿವೃದ್ಧಿ ಪಡಿಸಲಿದ್ದೇನೆ ಎಂದರು ಆಶ್ವಾಸನೆ ನೀಡಿದರು.
Advertisement
Advertisement
ಇದೇ ವೇಳೆ ಶೋಭಾ ಕರಂದ್ಲಾಜೆ ‘ಬಳೆ’ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಮ್ಮಕ್ಕ ಯಾವಾಗ ಬಳೆ ಕಳುಹಿಸುತ್ತಾರೆ ಎಂದು ತಿಳಿಸಿ ಸಂತೋಷದಿಂದ ಹಾಕಿಸಿಕೊಳ್ಳುತ್ತೇವೆ ಎಂದರು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಚಿವ ರೇವಣ್ಣ ಪರ ಟ್ವೀಟ್ ಮಾಡಿದ್ದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನಾನು ಯಾವುದೇ ಟ್ವೀಟ್ ಬಗ್ಗೆ ಉತ್ತರ ಕೊಡಲ್ಲ. 2023 ನಂತರ ಅದರ ಬಗ್ಗೆ ಚರ್ಚೆ ಮಾಡೋಣ. ನಾಲ್ಕು ವರ್ಷ ಕುಮಾರಸ್ವಾಮಿಯವರೇ ಸಿಎಂ. ಜನರು ತಮ್ಮ ಮತಗಳನ್ನು ಬಿಜೆಪಿಗೆ ಹಾಕುವ ಮೂಲಕ ವ್ಯರ್ಥ ಮಾಡಿಕೊಳ್ಳಬೇಡಿ. ಅಭಿವೃದ್ಧಿಯ ಪಥದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿ ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿದರು.
Advertisement
Advertisement
ಶೋಭಾ ಕರಂದ್ಲಾಜೆ ಹೇಳಿದ್ದೇನು?
ಸಿದ್ದರಾಮಯ್ಯನವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ದೇವರಾಜ ಅರಸು ಅವರನ್ನ ಹೋಲಿಸಿಕೊಳ್ಳುತ್ತಿದ್ದಾರೆ. ಅರಸು ಅವರನ್ನ ಹೋಲಿಸಿಕೊಳ್ಳುವ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ. ಅವರ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗಲ್ಲ, ಸಿದ್ದರಾಮಯ್ಯನವರಿಗೆ ಶಕ್ತಿ ಇದ್ದರೆ ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಲಿ. ನೀವು ಬಲಹೀನರು, ನಿಮ್ಮ ಶಾಸಕರು ಎಲ್ಲಿದ್ದಾರೆ? ಅವರಿಗೆ ಸಮಾಧಾನಪಡಿಸುವ ಕೆಲಸ ನಿಮ್ಮದು. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಕೈಗೆ ಬಳೆ ತೊಟ್ಟುಕೊಳ್ಳಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದರು.