ರಾಯಚೂರು: ಭಾರತ ಸರ್ಕಾರ ನಿರ್ಮಿಸಿದ ಉಗ್ರಾಣವನ್ನು ರೈತ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ಸಿನ ಮುಖಂಡರೊಬ್ಬರು ರಸಗೊಬ್ಬರಗಳ ದಾಸ್ತಾನು ಕೊಠಡಿಯಾಗಿ ಬದಲಾಯಿಸಿಕೊಂಡು ಅಂದಾ ದರ್ಬಾರ್ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಹೌದು, ಬರಗಾಲ ಹಾಗೂ ಸಾಲದ ಹೊರೆಯಿಂದ ರಾಜ್ಯದ ರೈತರು ಒಂದೆಡೆ ಕಂಗೆಟ್ಟು ಕುಳಿತಿದ್ದರೆ, ಜಿಲ್ಲೆಯ ರೈತರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ನಾರಾಯಣ ಸರ್ವಾಧಿಕಾರಿ ಧೋರಣೆಯಿಂದ ಅಂದಾ ದರ್ಬಾರ್ ನಡೆಸುತ್ತಿದ್ದಾರೆ. ಇಡೀ ಸಂಘವನ್ನು ತನ್ನ ಸ್ವಂತ ಆಸ್ತಿಯಂತೆ ಬಳಸಿಕೊಂಡಿದ್ದಲ್ಲದೇ, ಕಚೇರಿ ಹಾಗೂ ಉಗ್ರಾಣವನ್ನು ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.
ಭಾರತ ಸರ್ಕಾರ ಎಣ್ಣೆ ಕಾಳು ಉತ್ಪಾದನೆ ಯೋಜನೆ ಅಡಿಯಲ್ಲಿ ನಿರ್ಮಿಸಿದ ಉಗ್ರಾಣವು, ರೈತರ ಅನುಕೂಲಕ್ಕೆ ಬರುವ ಬದಲು ಅಧ್ಯಕ್ಷ ನಾರಾಯಣನ ಸ್ವಂತ ಆಸ್ತಿಯಾಗಿ ಮಾರ್ಪಟ್ಟಿದೆ. ನಾರಾಯಣ ರಸಗೊಬ್ಬರ ವ್ಯಾಪಾರಿಯಾಗಿದ್ದು ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ತನ್ನ ರಸಗೊಬ್ಬರದ ದಾಸ್ತಾನನ್ನು ಉಗ್ರಾಣದಲ್ಲೇ ಸಂಗ್ರಹಿಸಿಟ್ಟಿದ್ದಾರೆ. ಈ ಬಗ್ಗೆ ಉಳಿದ ಸದಸ್ಯರು ಪ್ರಶ್ನಿಸಿದರೆ, ಅವರಿಗೆ ಧಮ್ಕಿ ಹಾಕುತ್ತಿದ್ದಾರೆ.
ಕಚೇರಿಯನ್ನ ನೋಡಿದರೆ, ಎಂದೂ ಬಳಸದೇ ಇರುವ ಕುರ್ಚಿ, ಟೇಬಲ್‍ಗಳು ಸಂಪೂರ್ಣ ಧೂಳು ಹಿಡಿದಿವೆ. ರೈತರಿಂದ ಎಣ್ಣೆ ಕಾಳುಗಳನ್ನ ಖರೀದಿಸಿ ಒಕ್ಕೂಟಕ್ಕೆ ನೀಡಬೇಕಾದ ಅಧ್ಯಕ್ಷ, ಕಳೆದ ಮೂರು ವರ್ಷದಿಂದ ಕನಿಷ್ಠ ಒಂದು ಸದಸ್ಯರ ಹಾಗೂ ನಿರ್ದೇಶಕರ ಸಭೆಯನ್ನು ಸಹ ಕರೆದಿಲ್ಲ. ಕೇವಲ ರಸಗೊಬ್ಬರ ಮಾರಾಟಕ್ಕೆ ಮಾತ್ರ ಉಗ್ರಾಣ ಹಾಗೂ ಕಚೇರಿಯ ಬಾಗಿಲನ್ನು ತೆರೆಯುತ್ತಿದ್ದಾರೆ. ಯಾಕೆ ಹೀಗೆ ಎಂದು ಯಾರಾದರೂ ಪ್ರಶ್ನಿಸಿದರೆ, ಉಗ್ರಾಣವನ್ನು ಒಂದು ತಿಂಗಳ ಮಟ್ಟಿಗೆ ಬಾಡಿಗೆ ಕೊಟ್ಟಿದ್ದೇನೆ. ಅದರಲ್ಲಿ ತಪ್ಪೇನು ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.
ಉಗ್ರಾಣದ ಪಕ್ಕದಲ್ಲೇ ಅಂಗನವಾಡಿ ಶಾಲೆಯಿದ್ದು ರಸಗೊಬ್ಬರದ ವಾಸನೆಗೆ ಮಕ್ಕಳು ತತ್ತರಿಸಿ ಹೋಗಿದ್ದಾರೆ. ವಾಸನೆಯಿಂದಾಗಿ ಪೋಷಕರು ಮಕ್ಕಳನ್ನೂ ಸಹ ಅಂಗನವಾಡಿ ಶಾಲೆಗೆ ಕಳುಹಿಸುವುದನ್ನೇ ಬಿಟ್ಟಿದ್ದಾರೆ ಎಂದು ಸ್ಥಳೀಯರಾದ ನಲ್ಲಾರೆಡ್ಡಿ ಅಸಮಾಧಾನವನ್ನು ಹೊರಹಾಕಿದ್ದಾರೆ.
ಅಧ್ಯಕ್ಷನ ಅಂದಾ ದರ್ಬಾರ್ ಕುರಿತು ಪ್ರತಿಕ್ರಿಯಿಸಿರುವ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ತಿಪ್ಪಣ್ಣನವರು, ಈ ಕೂಡಲೇ ಪರಿಶೀಲನೆ ನಡೆಸಿ, ವರದಿ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದಾರೆ.
ಹೇಳುವವರು ಕೇಳುವವರು ಯಾರೂ ಇಲ್ಲಾ ಅಂದರೆ, ಪ್ರಭಾವಿಗಳು ಹೇಗೆಲ್ಲಾ ತಮ್ಮ ದರ್ಪ ಮೆರೆಯುತ್ತಾರೆ ಅನ್ನುವುದಕ್ಕೆ ಸಹಕಾರ ಸಂಘದ ಉಗ್ರಾಣದ ಸ್ಥಿತಿಯೇ ಉದಾಹರಣೆ. ಈಗಲಾದರೂ ಸಂಬಂಧಪಟ್ಟವರು ಈ ಕೂಡಲೇ ಎಚ್ಚೆತ್ತು, ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv