ಬೆಂಗಳೂರು: ಜನಾದೇಶವಿಲ್ಲದೇ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾರೆ. ಎಷ್ಟು ದಿನ ಆಗಿರ್ತಾರೆ ಅನ್ನೋದು ಗ್ಯಾರಂಟಿ ಇಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಿದ ರೀತಿಯನ್ನು ಟೀಕಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರ ಬಹುಮತ ಸಾಬೀತು ನಿರ್ಣಯ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನಾದೇಶದ ಮೇರೆಗೆ ಬಿಜೆಪಿ ಸರ್ಕಾರ ರಚನೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ನಮ್ಮ ಕೆಲ ಶಾಸಕರನ್ನು ಅತೃಪ್ತರನ್ನಾಗಿ ಬಿಜೆಪಿ ಮಾಡಿತು. ಯಡಿಯೂರಪ್ಪ ಮತ್ತು ನಾನು ಸಾರ್ವಜನಿಕ ಜೀವನಕ್ಕೆ ಒಂದೇ ಅವಧಿಯಲ್ಲಿ ಬಂದಿದ್ದೇವೆ. ಆದ್ರೆ ಒಂದು ಬಾರಿಯೂ ಜನಾದೇಶ ಸಿಗಲಿಲ್ಲ. ಭಿನ್ನ ಭಿನ್ನ ಸನ್ನಿವೇಶಗಳಲ್ಲಿ ನಾಲ್ಕು ಬಾರಿ ಸಿಎಂ ಆದ್ರು ಎಂದು ನನಗೆ ಬೇಸರವಾಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯದ ಚಾಟಿ ಬೀಸಿದರು.
ಗ್ಯಾರಂಟಿ ಇಲ್ಲ: 15ನೇ ವಿಧಾನಸಭೆಯಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿರಬೇಕು ಎಂಬುವುದು ನನ್ನಾಸೆ. ಆದ್ರೆ ನೀವೇ ಸಿಎಂ ಆಗಿರ್ತೀರಿ ಎಂಬುದರ ಬಗ್ಗೆ ನನಗೆ ಗ್ಯಾರಂಟಿ ಇಲ್ಲ. ತೃಪ್ತರು ಎನ್ನುವ ಅತೃಪ್ತರೊಂದಿಗೆ ಸರ್ಕಾರ ರಚನೆ ಮಾಡಿದ್ದಾರೆ. ಹಾಗಾಗಿ ಬಿಜೆಪಿಗೆ ಸ್ಥಿರ ಸರ್ಕಾರ ಕೊಡಲು ಸಾಧ್ಯವಿಲ್ಲ. ಇಂದು ಬಹುಮತ ಸಾಬೀತು ಮಾಡಿದ್ದು ಅನೈತಿಕ ಮತ್ತು ಅಸಂವಿಧಾನಿಕವಾಗಿದ್ದರಿಂದ ನಾನು ವಿರೋಧಿಸುತ್ತೇನೆ ಎಂದರು.
ಆಡಳಿತ ಯಂತ್ರ ಸ್ಥಗಿತವಾಗಿರಲಿಲ್ಲ:
ಮೈತ್ರಿ ಪರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಮಂಡಿಸಿದ್ದರು. ಅಂದು ಸಸತ ನಾಲ್ಕು ದಿನಗಳ ಕಾಲ ಚರ್ಚೆ ನಡೆಸಿದ್ದು, ನಾನು ಸಹ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ್ದೇನೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಬಹುಮತ ಸಾಬೀತಿನ ಪ್ರಸ್ತಾವನೆ ಭಾಷಣದಲ್ಲಿ ಆಡಳಿತ ಯಂತ್ರ ಸ್ಥಗಿತವಾಗಿದೆ ಎಂದು ಹೇಳಿದ್ದಾರೆ. ಮೈತ್ರಿ ಸರ್ಕಾರ ರಚನೆ ಕಾರ್ಯ ನಿರ್ವಹಿಸುವಾಗ ಆಡಳಿತ ಯಂತ್ರ ಸ್ಥಗಿತವಾಗಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಎರಡೂ ಪಕ್ಷಗಳ ಪ್ರಣಾಳಿಕೆಯಲ್ಲಿಯ ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರದಲ್ಲಿ ಕಾರ್ಯಕ್ರಮಗಳು ಮತ್ತು ಮೈತ್ರಿ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಜನತೆಗಾಗಿ ಪ್ರಾಮಾಣಿಕ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ಯಡಿಯೂರಪ್ಪನವರು ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಎರಡು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದರು. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯ 6 ಸಾವಿರದ ಜೊತೆಗೆ ರಾಜ್ಯ ಸರ್ಕಾರದಿಂದ 4 ಸಾವಿರ ರೂ. ನೀಡಲಾಗುತ್ತೆ ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ನನ್ನ ಕೊನೆಯ ಬಜೆಟ್ ನಲ್ಲಿ ‘ರೈತ ಬೆಳಕು’ ಕಾರ್ಯಕ್ರಮದಡಿಯಲ್ಲಿ ವರ್ಷಕ್ಕೆ 10 ಸಾವಿರ ರೂ. ನೀಡಬೇಕೆಂಬ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. ಸಾಲಮನ್ನಾ ಸೇರಿದಂತೆ ಬೇರೆ ಕಾರ್ಯಕ್ರಮಗಳು ಬಂದಿದ್ದರಿಂದ ರೈತ ಬೆಳಕು ಯೋಜನೆ ಜಾರಿಯಾಗಲಿಲ್ಲ.
ನೇಕಾರರ ಸಾಲಮನ್ನಾ ಘೋಷಣೆ ಮಾಡಲಾಗಿತ್ತು. ಈ ಯೋಜನೆಗೆ ಸಂಬಂಧಪಟ್ಟಂತೆ ಆದೇಶ ಸಹ ಹೊರಬಿದ್ದಿತ್ತು. ನಮ್ಮ ಯೋಜನೆಗಳನ್ನು ಯಡಿಯೂರಪ್ಪನವರು ಪುನರುಚ್ಚಿಸಿದ್ದಾರೆ. ಈ ಹಿಂದೆ ಸಹ ಎರಡು ಬಾರಿ ನೇಕಾರರ ಸಾಲಮನ್ನಾ ಮಾಡಿದ್ದೇನೆ ಎಂದರು.