-ಶಿವಸೇನೆ ಈಗ ಕೋಮುವಾದಿಯಲ್ಲ
ಮೈಸೂರು: ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಆಪ್ತರ ವಿರುದ್ಧ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜೊತೆಗಿದ್ದು ನನ್ನ ಬಗ್ಗೆ ಹೊಗಳುತ್ತಿದ್ದವರು ಇದೀಗ ನನ್ನ ವಿರುದ್ಧವೇ ಮಾತನಾಡುತ್ತಿದ್ದಾರೆ. ನೀವು ನನ್ನ ವಿರುದ್ಧ ಬಿದ್ದರೆ ಕಷ್ಟ ಆಗುತ್ತದೆ. ಮುಂದೆ ನಿಮ್ಮ ಪರವಾಗಿ ಯಾರು ಮಾತನಾಡುತ್ತಾರೆ. ಇದಕ್ಕೆ ಯಾರು ಬರಬೇಕು ಅಂತ ನೀವು ಯೋಚನೆ ಮಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ.
Advertisement
Advertisement
ನಾನು ಸಾಮಾಜಿಕ ನ್ಯಾಯದ ಪರವಾಗಿ ಇದ್ದೇನೆ. ಅದಕ್ಕೆ ನನ್ನ ಮೇಲೆ ಎಲ್ಲರೂ ಮುಗಿ ಬೀಳುತ್ತಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿಯವರು ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ ಎಂದರು.
Advertisement
ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಉಪ ಚುನಾವಣೆಯಲ್ಲಿ ಅನರ್ಹ ಶಾಸಕರನ್ನು ಸೋಲಿಸುವುದು ನಮ್ಮ ಉದ್ದೇಶ. ಅವರನ್ನ ಅನರ್ಹಗೊಳಿಸಲು ಹೋರಾಟ ಮಾಡಿದ್ದೆ. ಹೀಗಾಗಿ ಅವರಿಗೆ ನಾನೇ ಟಾರ್ಗೆಟ್ ಆಗಿದ್ದೇನೆ. ಎಲ್ಲ 15 ಕ್ಷೇತ್ರದ ಅಭ್ಯರ್ಥಿಗಳು ಫೈನಲ್ ಆಗಿದ್ದಾರೆ. ಈಗಾಗಲೇ ಕೆಲವರು ನಾಮಪತ್ರ ಸಲ್ಲಿಸಿದ್ದು, ಉಳಿದವರು ನಾಳೆ ಸಲ್ಲಿಸುತ್ತಾರೆ. ಉಪ ಚುನಾವಣೆಯಲ್ಲಿ 15 ಆಗದಿದ್ದರೂ 12 ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಸಿದ್ದರಾಮಯ್ಯ ಬಂಡವಾಳ ಬಿಚ್ಚುತ್ತೇನೆ ಎಂಬ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, 30 ವರ್ಷದಿಂದ ಬಿಚ್ಚದ ಬಂಡವಾಳವನ್ನು ಈಗ ಬಿಚ್ಚುತ್ತಾರಂತಾ? ಅಂದಿನಿಂದ ಆಗದ್ದು ಈಗ ಆಗುತ್ತಾ? ಅವರೇಲ್ಲ ಅನರ್ಹರಾಗಿ ಹತಾಶರಾಗಿದ್ದಾರೆ. ಅವರ ಮಾತಿಗೆ ಕಿಮ್ಮತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮಾನ ಮರ್ಯಾದೆ ಇದ್ದಿದ್ದರೆ ಮಂತ್ರಿಯಾಗಿ ಕ್ಷೇತ್ರ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಿದ್ರಾ? ಕೋರ್ಟ್ ನಲ್ಲೇ ಅನರ್ಹರು ಅಂತ ಹಣೆಪಟ್ಟಿ ಕಟ್ಟುಕೊಂಡು ಬಂದಿದ್ದಾರೆ. ಈಗ ಗೆದ್ದು ಮಂತ್ರಿಯಾಗಿ ಕ್ಷೇತ್ರ ಅಭಿವೃದ್ಧಿ ಮಾಡುತ್ತಾರಾ? ಇದೇಲ್ಲ ಚುನಾವಣೆಗೆ ಮಾತ್ರ ಮಾತನಾಡುವ ಮಾತುಗಳು. ಎಚ್.ವಿಶ್ವನಾಥ್ ಅವರು ಸಹ ಚುನಾವಣೆಗೋಸ್ಕರ ಜಿಲ್ಲೆಯನ್ನು ಇಬ್ಭಾಗ ಮಾಡುವ ಮಾತು ಆಡುತ್ತಿದ್ದಾರೆ. 30 ವರ್ಷ ಕಾಂಗ್ರೆಸ್‍ನಲ್ಲಿ ಇದ್ದಾಗ ಹಾಗೂ ಕಳೆದ ವರ್ಷ ಜೆಡಿಎಸ್‍ನಲ್ಲಿ ಇದ್ದಾಗ ಯಾಕೆ ಜಿಲ್ಲೆಯ ವಿಭಜಣೆ ಬಗ್ಗೆ ಮಾತನಾಡಲಿಲ್ಲ. ಅನರ್ಹರಾಗಿ ಗೆಲ್ಲುವುದಕ್ಕೆ ಆಗುವುದಿಲ್ಲ ಅಂತ ಹುಣಸೂರನ್ನು ಜಿಲ್ಲೆ ಮಾಡುತ್ತೇನೆ ಅಂತ ಹೇಳಿದ್ದಾರೆ. ಇದು ಚುನಾವಣೆ ಗಿಮಿಕ್. ಇದು ವರ್ಕ್ ಆಗುವುದಿಲ್ಲ ಎಂದರು.
ಶಿವಸೇನೆಯು ಅಧಿಕೃತವಾಗಿ ಎನ್‍ಡಿಎದಿಂದ ಹೊರ ಬಂದಿದೆ. ಹಾಗಾಗಿ ಶಿವಸೇನೆ ಈಗ ಕೋಮುವಾದಿಯಲ್ಲ. ಕೋಮುವಾದದಿಂದ ದೂರ ಉಳಿಯುವುದಾಗಿ ಶಿವಸೇನೆ ಹೇಳಿದೆ. ಇದರಿಂದಾಗಿ ಮಹಾರಾಷ್ಟ್ರದಲ್ಲಿ ಸರ್ಕಾರಕ ರಚನೆಗಾಗಿ ಎನ್‍ಸಿಪಿ ಹಾಗೂ ಕಾಂಗ್ರೆಸ್ ಶಿವಸೇನೆ ಜೊತೆ ಕೈ ಜೋಡಿಸಲು ಮುಂದಾಗಿವೆ. ಮುಂದೇನಾದರು ಶಿವಸೇನೆ ಕೋಮುವಾದ ಪ್ರತಿಪಾದಿಸಿದರೆ ಅದರಿಂದ ದೂರಾಗುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.