– 2 ಲಾರಿಗಳಲ್ಲಿ ಮನೆಯಲ್ಲಿರುವ ವಸ್ತುಗಳು ಸಾಗಾಟ
– ಮಂಡ್ಯದಲ್ಲಿ ರಾಜಕೀಯ ಭವಿಷ್ಯವಿಲ್ಲ ಎಂದು ಊರು ಬಿಟ್ಟರೆ?
ಮಂಡ್ಯ: ಅಂಬಿ ಅಂತಿಮ ದರ್ಶನಕ್ಕೆ ಬಾರದೇ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದ ಮಾಜಿ ಸಂಸದೆ ರಮ್ಯಾ, ರಾತ್ರೋ ರಾತ್ರಿ ಮಂಡ್ಯದಿಂದ ಮನೆ ಖಾಲಿ ಮಾಡೋ ಮೂಲಕ, ರಾಜಕೀಯವಾಗಿಯೂ ಮಂಡ್ಯದಿಂದ ದೂರ ಸರಿದರೇ ಎನ್ನುವ ಪ್ರಶ್ನೆ ಎದ್ದಿದೆ.
ಈ ಪ್ರಶ್ನೆಗೆ ಉತ್ತರ ಎನ್ನುವಂತೆ ತಡರಾತ್ರಿ ಮಂಡ್ಯದ ವಿದ್ಯಾನಗರದಲ್ಲಿರುವ ರಮ್ಯಾ ಅವರ ಮನೆಗೆ ಬಂದ ಎರಡು ಲಾರಿಗಳಿಗೆ ಮನೆಯ ವಸ್ತುಗಳನ್ನು ತುಂಬುತ್ತಿರುವ ದೃಶ್ಯ ಪಬ್ಲಿಕ್ ಟಿವಿಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
Advertisement
ರಮ್ಯಾ ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ಮಂಡ್ಯ ನಗರದಲ್ಲಿ ಮನೆ ಮಾಡಿ, ಇಲ್ಲೇ ಇದ್ದು ಜನರ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದರು. ಅದಾದ ನಂತರ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ರಮ್ಯಾ, ಸದ್ದಿಲ್ಲದೆ ಮಂಡ್ಯದಿಂದ ಮನೆ ಖಾಲಿ ಮಾಡಿ ವರ್ಷಗಟ್ಟಲೇ ಈ ಕಡೆ ತಲೆ ಹಾಕಲೇ ಇಲ್ಲ. ಇದನ್ನೂ ಓದಿ: ಅಂಬಿ ಅಂತಿಮ ದರ್ಶನಕ್ಕೆ ಬಾರದ ರಮ್ಯಾ ಅಸಲಿ ಕಾರಣ ಇಲ್ಲಿದೆ
Advertisement
ಬಳಿಕ ಇದ್ದಕ್ಕಿದ್ದಂತೆ ಮಂಡ್ಯಕ್ಕೆ ಆಗಮಿಸಿದ ರಮ್ಯಾ ನಾನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಿದ್ದೆ. ಈಗ ವಿದ್ಯಾಭ್ಯಾಸ ಮುಗಿಸಿ ವಾಪಸ್ ಬಂದಿದ್ದೇನೆ. ಇನ್ನು ಮುಂದೆ ನಾನು ನಿಮ್ಮ ಜೊತೆಯೇ ಇರುತ್ತೇನೆ ಎಂದು ಹೇಳಿ ಮಂಡ್ಯದಲ್ಲಿ ಎರಡನೇ ಬಾರಿಗೆ ಬಾಡಿಗೆ ಮನೆ ಮಾಡಿದ್ದರು. ಮತ್ತೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕನಸು ಕಂಡಿದ್ದ ರಮ್ಯಾ ಅವರಿಗೆ, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಿಸಿತುಪ್ಪವಾಗಿ ಪರಿಣಮಿಸಿತ್ತು.
Advertisement
ಇತ್ತೀಚೆಗೆ ನಡೆದ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾಗಿ, ಕಾಂಗ್ರೆಸ್ ಪಕ್ಷ ಜೆಡಿಎಸ್‍ಗೆ ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟುಕೊಟ್ಟಿತ್ತು. ಅದರಂತೆ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಜೆಡಿಎಸ್‍ಗೆ ಬಿಟ್ಟುಕೊಡುವುದು ಬಹುತೇಕ ಖಚಿತವಾಗಿದೆ. ಇದನ್ನೂ ಓದಿ:ರಮ್ಯಾಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಮಂಡ್ಯ ಜನತೆ
ಮಂಡ್ಯದಲ್ಲಿ ನನಗೆ ರಾಜಕೀಯ ನೆಲೆಯಿಲ್ಲ ಎಂದು ಯೋಚಿಸಿದ ರಮ್ಯಾ ಈ ಹಿಂದೆಯೇ ಮಂಡ್ಯ ತೊರೆಯುವ ಯೋಚನೆ ಮಾಡಿದ್ದರು. ಇದೇ ವೇಳೆ ಅಂಬರೀಶ್ ಅವರು ಮೃತಪಟ್ಟಾಗಲೂ ಅವರ ಅಂತಿಮ ದರ್ಶನ ಪಡೆಯಲು ರಮ್ಯಾ ಮಂಡ್ಯಕ್ಕೆ ಬರಲಿಲ್ಲ. ಇದರಿಂದ ಆಕ್ರೋಶಗೊಂಡ ಅಂಬಿ ಅಭಿಮಾನಿಗಳು ರಮ್ಯಾ ನಮ್ಮ ಪಾಲಿಗೆ ಸತ್ತಂತೆ ಎಂದು ಸಿಟ್ಟು ಹೊರಹಾಕಿದ್ರು. ಈ ಎಲ್ಲ ಬೆಳವಣಿಗೆ ನಡುವೆಯೇ ರಾತ್ರೋರಾತ್ರಿ ರಮ್ಯಾ ಅವರ ಮನೆಯಲ್ಲಿದ್ದ ವಸ್ತುಗಳನ್ನು ಎರಡು ಲಾರಿಗಳ ಮೂಲಕ ಹೊರಗೆ ಸಾಗಿಸಲಾಗುತ್ತಿದೆ. ಇದೆಲ್ಲವನ್ನು ನೋಡಿದರೆ ಮಂಡ್ಯದಲ್ಲಿ ನನಗಿನ್ನು ರಾಜಕೀಯವಾಗಿ ಭವಿಷ್ಯವಿಲ್ಲ ಎಂದು ಶಾಶ್ವತವಾಗಿ ರಮ್ಯಾ ಮಂಡ್ಯ ತೊರೆಯುತ್ತಿದ್ದಾರೆ ಎಂಬ ಚರ್ಚೆ ಜಿಲ್ಲೆಯಲ್ಲಿ ಶುರುವಾಗಿದೆ. ಇದನ್ನೂ ಓದಿ: ಮಾಜಿ ಸಂಸದೆ ರಮ್ಯಾ ಸೋಲಿನ ಗುಟ್ಟು ಬಿಚ್ಚಿಟ್ಟ ಮಾಜಿ ಶಾಸಕ ಶಿವರಾಮೇಗೌಡ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv