– ರಮೇಶ್ ಜಾರಕಿಹೊಳಿ ಪಕ್ಷ ಬಿಡಲ್ಲ
– ಲೋಕಸಭಾ ಚುನಾವಣೆಗೂ ಮುನ್ನ ಅಧಿಕಾರ ಹಿಡಿಯಲು ರಾಜ್ಯ ಬಿಜೆಪಿ ಪ್ಲಾನ್
ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಬಾಯಿ ಮಾತಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಬಗ್ಗೆ ದಯೆ ತೋರಿಸೋದು ಪ್ರಯೋಜನಕ್ಕೆ ಬರಲ್ಲ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟಾಂಗ್ ಕೊಟ್ಟಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರಿಂದ ಗೃಹ ಖಾತೆ ವಾಪಸ್ ಪಡೆದಿದ್ದ ವಿಚಾರವಾಗಿ ಹೇಳಿಕೆ ನೀಡಿದ್ದ ಎಚ್.ಡಿ.ರೇವಣ್ಣ ಅವರ ವಿರುದ್ಧ ಕಿಡಿಕಾರಿದರು. ಯಾರಿಗೆ ಯಾವ ಖಾತೆ ಅಂತ ಕಾಂಗ್ರೆಸ್‍ನ ನಾಯಕರು ವಿಚಾರ ಮಾಡಿಯೇ ನಿರ್ಧಾರ ಕೈಗೊಳ್ಳುತ್ತಾರೆ. ಒಬ್ಬರ ಮೇಲೆ ಮತ್ತೊಬ್ಬರು ಬಾಯಿ ಮಾತಲ್ಲಿ ಸಿಂಪತಿ ತೋರಿಸುವುದು ಪ್ರಯೋಜನಕ್ಕೆ ಬರಲ್ಲ ಎಂದು ಸಚಿವ ರೇವಣ್ಣಗೆ ಠಕ್ಕರ್ ಕೊಟ್ಟರು.
Advertisement
Advertisement
ದಲಿತರಿಗೆ ಸಿಎಂ ಸ್ಥಾನ ಕೊಡುವ ವಿಚಾರದ ಬಗ್ಗೆ ಮಾತಾಡಿದ ಖರ್ಗೆ ಅವರು, ಐವತ್ತು ವರ್ಷಗಳಿಂದ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಅಂತ ಕೇಳುತ್ತಾ ಬಂದಿದ್ದೇವೆ. ಇದನ್ನು ಮಾಧ್ಯಮಗಳ ಮುಂದೆ ಮಾತಾಡಿದರೆ ಬಗೆಹರಿಯಲ್ಲ. ಈ ಬಗ್ಗೆ ನಾನು ಮಾತಾಡಲ್ಲ ಎಂದರು. ಇದನ್ನು ಓದಿ: ರಮೇಶ್ ಜಾರಕಿಹೊಳಿ ಪಕ್ಷ ಬಿಡುವ ಸುಳಿವು ಕೊಟ್ರಾ ಮಾಜಿ ಸಿಎಂ
Advertisement
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ಬಿಡುವಷ್ಟು ಕೆಟ್ಟ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅವರು ನಮ್ಮ ಪಕ್ಷದಲ್ಲಿ 25 ವರ್ಷ ಕಾರ್ಯನಿರ್ವಹಿಸಿದ್ದಾರೆ. ಪಕ್ಷವೂ ಅವರಿಗೆ ಸಾಕಷ್ಟು ಅವಕಾಶ ನೀಡಿದೆ ಎಂದು ಸ್ಪಷ್ಟನೆ ನೀಡಿದ ಅವರು, ರಾಜ್ಯ ಬಿಜೆಪಿ ನಾಯಕರು ಲೋಕಸಭಾ ಚುನಾವಣೆಗೂ ಮುನ್ನ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಪ್ರಯತ್ನ ಫಲಿಸುವುದಿಲ್ಲ ಎಂದು ವ್ಯಂಗ್ಯವಾಡಿದರು.
Advertisement
ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರವಾಗಿ ಮಾತನಾಡಿದ ಖರ್ಗೆ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಜೆಡಿಎಸ್‍ನವರು 12 ಸೀಟು ಕೇಳಿದ್ದಾರೆ ಎಂದು ನಾವು ಮಾತನಾಡುವುದು ಸರಿಯಲ್ಲ. ಅವರ ನಿಲುವನ್ನು ಅವರು ತಿಳಿಸಿದ್ದಾರೆ, ಅದರಲ್ಲಿ ಯಾವುದೇ ತಪ್ಪಿಲ್ಲ. ಚರ್ಚೆ ನಡೆದ ಬಳಿಕ ಯಾರಿಗೆ ಎಷ್ಟು ಸೀಟು ಎನ್ನವುದು ಹೊರ ಬೀಳುತ್ತದೆ ಎಂದು ತಿಳಿಸಿದರು.
ಮಹಾಘಟಬಂಧನ್ ವಿಚಾರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ ಅವರು ಮಾತುಕತೆ ನಡೆಸುವ ಬಗ್ಗೆ ನನಗೆ ಮಾಹಿತಿ ಇಲ್ಲ. ಮಹಾಘಟಬಂಧನ್ ಹೈಕಮಾಂಡ್‍ಗೆ ಬಿಟ್ಟಿದ್ದು ಎಂದ ಅವರು, ದೇಶದ ಜನತೆಗೆ ಹೊಸ ವರ್ಷಕ್ಕೆ ಶುಭ ಕೋರಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv