ಬೆಂಗಳೂರು: ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾಗಿರುವುದು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಿಂದ ಜನ ಎಷ್ಟು ಬೇಸತ್ತಿದ್ದಾರೆ ಎನ್ನುವ ಸೂಚನೆ ಎಂದು ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಉಗ್ರಪ್ಪ ಜಯವನ್ನು ಬಣ್ಣಿಸಿದ್ದಾರೆ.
ಉಪ ಚುನಾವಣಾ ಫಲಿತಾಂಶಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಉಪ ಚುನಾವಣೆಗಳು ಪ್ರಧಾನಿ ಮೋದಿ ಆಡಳಿತದ ವಿರುದ್ಧದ ಸೂಚನೆಯಾಗಿದೆ. ಬಳ್ಳಾರಿಯಲ್ಲಿ ಬಿಜೆಪಿ ಹೀನಾಯವಾಗಿ ಸೋಲನ್ನು ಅನುಭವಿಸಿದೆ. ಕಾಂಗ್ರೆಸ್ಸಿನ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರು ಭಾರೀ ಅಂತರದಿಂದ ಗೆದ್ದಿದ್ದಾರೆ. ಈ ಬಗ್ಗೆ ನಮಗೆ ಯಾವುದೇ ಅಚ್ಚರಿ ಇಲ್ಲ. ಏಕೆಂದರೆ ನಮಗೆ ಮೊದಲೇ ನಿರೀಕ್ಷೆ ಇತ್ತು ಹಾಗೆ ಆಗಿದೆ ಎಂದು ಹೇಳಿದ್ರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ನವೆಂಬರ್ 6ಕ್ಕೆ ಅಸ್ಥಿರಗೊಳಿಸುತ್ತೇವೆ ಎಂದು ಮುಹೂರ್ತ ಇಟ್ಟಿದ್ದರು. ಆದರೆ ಅವರಿಗೆ ವಾಸ್ತವದ ಸ್ಥಿತಿ ಗೊತ್ತಿಲ್ಲ. ಅದಕ್ಕೆ ಆ ರೀತಿ ಮಾತನಾಡುತ್ತಿದ್ದರು. ಅವರಿಗೆ ಮಾತನಾಡುವ ಚಟ ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದರು.
ಶಿವಮೊಗ್ಗದಲ್ಲೂ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿ ಗೆಲ್ಲುತ್ತಾರೆಂದು ವಿಶ್ವಾಸ ಇತ್ತು. ಆದರೂ ಸಹ ಬಿಜೆಪಿಯವರು ಬಹಳ ಅಂತರದಿಂದ ಗೆಲುವು ಸಾಧಿಸಿಲ್ಲ. ರಾಜ್ಯದಲ್ಲಿನ ಉಪ ಚುನಾವಣೆಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಸೋಲಿಗೆ ಸೂಚನೆ. ಅಲ್ಲದೇ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ಗೆಲುವು ಸಾಧಿಸುತ್ತದೆ ಎನ್ನುವುದನ್ನು ಇದು ತೋರಿಸಿದೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv