ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಮುಂದಾಗಿವೆ. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ವಿಶೇಷ ಸಂದರ್ಶನ ನೀಡಿದ್ದು, ಅಧಿಕಾರಕ್ಕಾಗಿ ನಾವು ಒಂದಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರಕ್ಕಾಗಿ ಒಂದಾಗಿದೆ ಎಂಬುವುದು ನಮ್ಮ ವಿರೋಧಿಗಳ ಮಾತು. ಆದ್ರೆ ತತ್ವ ಸಿದ್ದಾತಗಳ ಅಡಿಯಲ್ಲಿ ಒಂದಾಗಿದ್ದೇವೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕು. ಸಂವಿಧಾನ ಬಾಹಿರ ಮತ್ತು ಅಕ್ರಮವಾಗಿ ಸರ್ಕಾರ ರಚನೆಗೆ ಮುಂದಾಗಿದ್ದ ಬಿಜೆಪಿ ವಿರುದ್ಧ ಹೋರಾಟ ಮಾಡುವ ಸಲುವಾಗಿ ಎರಡೂ ಪಕ್ಷಗಳು ಒಂದಾಗಿವೆ ಅಂತಾ ತಿಳಿಸಿದ್ರು.
ಈ ಹಿಂದೆ 5 ವರ್ಷಗಳಲ್ಲಿ ಕಾಂಗ್ರೆಸ್ ಹಲವು ಜನಪರ ಯೋಜನೆಗಳನ್ನು ತಂದಿದೆ. ನಮ್ಮ ಎಲ್ಲ ಕಾರ್ಯಕ್ರಮಗಳು ಸಹ ರಾಜ್ಯದ ಜನರಿಗೂ ತಲುಪಿವೆ. ಆದ್ರೂ ಚುನಾವಣೆಯಲ್ಲಿ ಅನಿರೀಕ್ಷಿತವಾದ ಫಲಿತಾಂಶ ಹೊರಬಂದಿದ್ದು, ನಾವು ಎಲ್ಲಿ ಎಡವಿದ್ದು, ನಮ್ಮ ನ್ಯೂನತೆಗಳು ಏನು ಎಂಬುದರ ಬಗ್ಗೆ ಗ್ರೌಂಡ್ ಲೆವಲ್‍ನಿಂದ ಮಾಹಿತಿ ಪಡೆದುಕೊಂಡು ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸಲಿದ್ದೇವೆ. ಇಂತಹ ಕಾರಣಗಳಿಗೆ ನಮಗೆ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲು ಆಗಿಲ್ಲ ಎಂಬುದನ್ನು ಈ ಸಮಯದಲ್ಲಿ ಹೇಳಲು ಸಾಧ್ಯವಿಲ್ಲ ಅಂತಾ ಸ್ಪಷ್ಟಪಡಿಸಿದ್ರು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಎಲ್ಲಿಯೂ ಹಿನ್ನಡೆಯಾಗಿಲ್ಲ. ಶೇಕಡಾವಾರು ಮತಗಳನ್ನು ನೋಡಿದ್ರೆ ಹೆಚ್ಚಿನ ಮತಗಳು ಕಾಂಗ್ರೆಸ್‍ಗೆ ಲಭಿಸಿದ್ದು, ಜಾತ್ಯಾತೀತ ಪಕ್ಷಗಳು ಸಹ ನಮ್ಮೊಂದಿಗಿವೆ. ಬಿಜೆಪಿ ಅಧಿಕಾರದ ದುರಾಸೆಯಿಂದಾಗಿ ಯಡಿಯೂರಪ್ಪ ಅವರಿಗೆ ಪ್ರಮಾಣ ವಚನ ನೀಡುವಂತೆ ಮಾಡಿತು. ಆದ್ರೂ ವಿಶ್ವಾಸಮತ ಯಾಚನೆಗೂ ಮುನ್ನವೇ ಬಿಜೆಪಿ ಸೋಲೊಪ್ಪಿಕೊಂಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್‍ಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ರು.