ಮಂಗಳೂರು: ಗ್ರಾಮ ಪಂಚಾಯತ್ ಉಪಾಧ್ಯಕ್ಷರೊಬ್ಬರನ್ನು ಪಂಚಾಯತ್ ಒಳಗಡೆ ಬರ್ಬರವಾಗಿ ಕಡಿದು ಕೊಲೆ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದ ಕರೋಪಾಡಿಯಲ್ಲಿ ನಡೆದಿದೆ.
ಅಬ್ದುಲ್ ಜಲೀಲ್ ಕೊಲೆಯಾದ ಉಪಾಧ್ಯಕ್ಷ. ಮುಸುಕುಧಾರಿಗಳಾಗಿ ಎರಡು ಬೈಕ್‍ನಲ್ಲಿ ಬಂದ ನಾಲ್ವರು ಅಬ್ದುಲ್ ಜಲೀಲ್ ಅವರ ಮೇಲೆ ಮೆಣಸಿನ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಪಂಚಾಯತ್ ಒಳಗಿದ್ದ ಸಿಬ್ಬಂದಿಗೂ ಮಾರಕಾಸ್ತ್ರ ತೋರಿಸಿ ಬೆದರಿಸಿ ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾದ ಜಲೀಲ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಈ ಹಿಂದೆ ಕರೋಪಾಡಿಯಲ್ಲಿ ನಿಧಿಶೋಧ ಪ್ರಕರಣ ನಡೆದ ಸಂಧರ್ಭದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಜಲೀಲ್ ನೆರವಾಗಿದ್ದು, ಜೈಲಿನಿಂದ ಬಿಡುಗಡೆಗೊಂಡ ಆರೋಪಿಗಳೇ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ.ಬೊರಸೆ ಸೇರಿದಂತೆ ಹಿರಿಯ ಅಧಿಕಾರಿಗಳು, ಶ್ವಾನದಳ, ಬೆರಳಚ್ಚು ತಜ್ಞ ರು ಭೇಟಿ ನೀಡಿದ್ದು ತನಿಖೆ ಆರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದ ಜಲೀಲ್ ಹತ್ಯೆಯ ಹಿಂದೆ ಹಲವು ಅನುಮಾನಗಳು ಕವಲೊಡೆದಿವೆ.