ಶಿವಮೊಗ್ಗ: ಮೈತ್ರಿ ಪಕ್ಷಗಳಾದ ಜೆಡಿಎಸ್- ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಶಿವಮೊಗ್ಗ ಲೋಕಸಭಾ ಉಪಚುನಾವಣಾ ಕಣ ವೇದಿಕೆ ಆಗಿದೆ. ಸಾಗರದಲ್ಲಿ ಸೋಮವಾರ ನಡೆದ ಬಹಿರಂಗ ಸಭೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಭಾವುಕರಾಗಿದ್ದಾರೆ.
ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಭಾಷಣ ಮಾಡುವಾಗ ಕಾಗೋಡು ತಿಮ್ಮಪ್ಪರನ್ನು ಹಾಡಿ ಹೊಗಳಿದ್ರು. ಅಲ್ಲದೆ ಅವರನ್ನು ಸಾಗರದ ಜನ ಯಾಕೆ ಸೋಲಿಸಿದ್ರಿ. ಅವರಿಗೆ ಈ ವಯಸ್ಸಲ್ಲಿ ಯಾಕೆ ಕಷ್ಟ ಕೊಟ್ರಿ..? ಅಂತ ಪ್ರಶ್ನಿಸಿದ್ರು. ಅಲ್ಲದೆ ಕಾಗೋಡು ತಿಮ್ಮಪ್ಪ ಒಪ್ಪಿದ್ರೆ ಅವರನ್ನು ವಿಧಾನಪರಿಷತ್‍ಗೆ ಆಯ್ಕೆ ಮಾಡಿ, ಮಂತ್ರಿ ಮಾಡ್ತೀನಿ ಅಂತಾ ಹೇಳಿದ್ರು. ಇದೇ ವೇಳೆ ವೇದಿಕೆಯಲ್ಲಿದ್ದ ಕಾಗೋಡು ತಿಮ್ಮಪ್ಪ ಭಾವುಕರಾಗಿ ಕೈ ಮುಗಿದು ಕಣ್ಣೀರು ಹಾಕಿದ್ರು.
ಬಳಿಕ ಮಾತನಾಡಿದ ತಿಮ್ಮಪ್ಪ, ನಾನು ಹೆಚ್ಚು ಮಾತಾಡಿದ್ರೆ ಕಣ್ಣೀರು ಬರುತ್ತೆ, ಹಾಗಾಗಿ ನಾನು ಹೆಚ್ಚು ಮಾತಾಡಲ್ಲ. ಹೋರಾಟದ ನೆಲ ಇದು, ಹೋರಾಟ ಮಾಡಿದವರು ಯಾರು ಇಲ್ಲ. ಈಗ ಮಧು ಬಂಗಾರಪ್ಪರನ್ನ ನಾವು ಗೆಲ್ಲಿಸಬೇಕು. ಭ್ರಷ್ಟ ರಾಜಕಾರಣಿ ಯಡಿಯೂರಪ್ಪಗೆ ತಕ್ಕ ಪಾಠ ಕಲಿಸಬೇಕು ಅಂದ್ರು.
ಜಿಲ್ಲೆಯ ಸೊರಬದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಗೆದ್ದು ರಾಜೀನಾಮೆ ಕೊಟ್ಟು ಚುನಾವಣೆ ಬರೋ ಹಾಗೆ ಮಾಡಿದರು. ಈಗ ಅವರ ಮಗನನ್ನು ನಿಲ್ಲಿಸಿದ್ದಾರೆ. ಇದೇನು ಅವರ ಆಸ್ತಿನಾ..? ಇಂಥವರಿಗೆ ಜನರು ತಕ್ಕ ಪಾಠ ಕಲಿಸಬೇಕು. ಗ್ರಹಚಾರಕ್ಕೆ ಬಂಗಾರಪ್ಪನವರನ್ನು ಕಳೆದುಕೊಂಡಿದ್ದೀವಿ, ನಾನು ಉಳಿದುಕೊಂಡಿದ್ದೀನಿ. ಈ ಹೋರಾಟದ ಭೂಮಿಯ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಿ ಅಂತ ಕೇಳಿಕೊಂಡರು.
ಇಂದು ಸಂಜೆ ಎನ್ ಇ ಎಸ್ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ. ಇದೇ ಮೊದಲ ಬಾರಿಗೆ ಸಿಎಂ ಕುಮಾರಸ್ವಾಮಿ ಹಾಗೂ ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಸಿಎಂ ಸಿದ್ದರಾಮಯ್ಯ ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ. ಇವರೊಂದಿಗೆ ಮೈತ್ರಿ ಪಕ್ಷಗಳಾದ ಜೆಡಿಎಸ್- ಕಾಂಗ್ರೆಸ್ ನ ಘಟಾನುಘಟಿ ನಾಯಕರು ಪಾಲ್ಗೊಳ್ಳುವರು. ಹೆಚ್.ಡಿ.ದೇವೇಗೌಡ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ ಇನ್ನಿತರರು ಪಾಲ್ಗೊಳ್ಳುವರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೂರುದಿನಗಳ ಕಾಲ ಕ್ಷೇತ್ರದಲ್ಲೇ ಇದ್ದು ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ಮಾಡಿದ್ದಾರೆ. ಕೊನೆ ದಿನದ ಈ ಸಮಾವೇಶದ ಮೈತ್ರಿ ಸರ್ಕಾರ ಒಗ್ಗಟ್ಟಿಗೆ ಸಾಕ್ಷಿ ಆಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv