-ಕಣ್ಣೀರಿಗೆ ದೇವೇಗೌಡರ ಕುಟುಂಬ ಹೆಸರುವಾಸಿ
-ದೇವೇಗೌಡರಿಂದ ಒಕ್ಕಲಿಗರಿಗೆ ಮೋಸ
ತುಮಕೂರು: ಜೆಡಿಎಸ್ ಪಕ್ಷಕ್ಕೆ ಎಷ್ಟೇ ಸೀಟ್ ಗಳನ್ನು ಬಿಟ್ಟುಕೊಟ್ಟರು ಅವರು ಮೂರು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುತ್ತಾರೆ. ಒಂದು ವೇಳೆ ಮೂರಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸವಾಲು ಹಾಕಿದ್ದಾರೆ.
ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಇನ್ನು ನಿರ್ಣಯ ತೆಗೆದುಕೊಂಡಿಲ್ಲ. ಮಾರ್ಚ್ 16ರಂದು ಎಲ್ಲವು ಅಂತಿಮವಾಗಲಿದ್ದು, ಹಾಲಿ ಸಂಸದರ ಕ್ಷೇತ್ರವನ್ನು ತ್ಯಾಗ ಮಾಡಲ್ಲ ಎಂದು ಹೈಕಮಾಂಡ್ ಗೆ ಹೇಳಿದ್ದೇವೆ. ಹೀಗಾಗಿ ಕಾರ್ಯಕರ್ತರು ಯಾವುದೇ ಊಹಾಪೋಹಗಳ ಸುದ್ದಿಗೆ ಕಿವಿಗೊಡಬಾರದು. ಮಂಡ್ಯ ಮತ್ತು ಹಾಸನದಲ್ಲಿ ಜೆಡಿಎಸ್ ಗೆಲುವು ಸುಲಭವಾಗಿಲ್ಲ. ನಾವೇನು ಸನ್ಯಾಸಿಗಳಲ್ಲ, ನಮ್ಮ ಅನಿಸಿಕೆಗಳನ್ನ ಕಾರ್ಯಗತ ಮಾಡಲು ಏನೆಲ್ಲಾ ಮಾಡಬೇಕು ಅದನ್ನೆಲ್ಲಾ ಮಾಡುತ್ತಿದ್ದೇವೆ ಎಂದು ಹೇಳುವ ಮೂಲಕ ಜೆಡಿಎಸ್ ಸೋಲಿಸಲು ರಣತಂತ್ರ ರೂಪಿಸ್ತಿನಿ ಎಂದು ಪರೋಕ್ಷವಾಗಿ ತಿಳಿಸಿದರು.
ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿದರ ಕುರಿತು ಮಾತನಾಡಿದ ರಾಜಣ್ಣ, ಇಲ್ಲಿ ಜೆಡಿಎಸ್ ಗೆ ಟಿಕೆಟ್ ಕೊಟ್ಟರೆ, ನಾನು ಪಕ್ಷೇತರವಾಗಿಯಾದರೂ ಸ್ಪರ್ಧೆ ಮಾಡುತ್ತೇನೆ. ಕಾಂಗ್ರೆಸ್ ಉಳುವಿಗಾಗಿ ನನ್ನ ಸ್ಪರ್ಧೆಯೇ ಹೊರತು ಜೆಡಿಎಸ್ ವಿರುದ್ಧ ಅಲ್ಲ. ಜೆಡಿಎಸ್ ಅವರನ್ನ ಹೀಗೆ ಬಿಟ್ಟರೆ ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ನಿರ್ನಾಮ ಅಗಲಿದೆ. ಹಾಗಾಗಿ ಕಾಂಗ್ರೆಸ್ ಉಳಿಸಲು ಏನು ಮಾಡಬೇಕು ಅದನ್ನು ಮಾಡಲು ಸಿದ್ಧನಿದ್ದೇನೆ ಎಂದು ಜೆಡಿಎಸ್ ವಿರುದ್ಧ ಗುಡುಗಿದರು.
ಮುದ್ದಹನುಮೇಗೌಡ ಒಕ್ಕಲಿಗರ ಚಾಂಪಿಯನ್ ಎಂದು ಕರೆಸಿಕೊಳ್ಳುತ್ತಾರೆ. ಮುದ್ದಹನುಮೇಗೌಡ ಒಕ್ಕಲಿಗರಲ್ವಾ ಎಂದು ಪ್ರಶ್ನೆ ಮಾಡಿದ ರಾಜಣ್ಣ ಎಲ್ಲ ಗೊತ್ತಿದ್ದರೂ ತುಮಕೂರು ಟಿಕೆಟ್ ಕೇಳುತ್ತಿದ್ದಾರೆ. ಇದು ಒಕ್ಕಲಿಗರಿಗೆ ಮಾಡುವ ಮೋಸವಾಗಿದೆ. ಈ ಮೊದಲು ರಾಜಕೀಯದಲ್ಲಿ ದೇವೇಗೌಡರಿಗೆ ಒಳ್ಳೆಯ ಹೆಸರಿತ್ತು. ಮೊಮ್ಮಕ್ಕಳ ರಾಜಕೀಯ ಜೀವನಕ್ಕಾಗಿ ತಮ್ಮ ಹೆಸರನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಕಣ್ಣೀರು ಹಾಕಲು ದೇವೇಗೌಡರ ಕುಟುಂಬ ಹೆಸರುವಾಸಿಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿಯೂ ಅದನ್ನೇ ಬಂಡವಾಳ ಮಾಡಿಕೊಂಡು ಮತ ಕೇಳುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv