ಮಂಗಳೂರು: ಸಚಿವ ರಮಾನಾಥ ರೈ ತನ್ನ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ವಿಚಾರದ ಬಗ್ಗೆ ತಿಳಿದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತೀರಾ ಗದ್ಗದಿತರಾಗಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ.
ಬಂಟ್ವಾಳದಲ್ಲಿ ನಡೆದ ಬಿಲ್ಲವ ಸಂಘದ ಕಾರ್ಯಕ್ರಮದಲ್ಲಿ ಜನಾರ್ದನ ಪೂಜಾರಿ ಮತ್ತು ಅವರ ಆಪ್ತ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಪಾಲ್ಗೊಂಡಿದ್ದರು. ಹರಿಕೃಷ್ಣ ಬಂಟ್ವಾಳ್ ವೇದಿಕೆಯಲ್ಲಿ ಮಾತನಾಡುತ್ತಾ, ಸಚಿವ ರಮಾನಾಥ ರೈ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರು. ಹಿರಿಯರಾದ ಜನಾರ್ದನ ಪೂಜಾರಿಗೆ ಅವಮಾನಿಸಿದ್ದು ಇಡೀ ಬಿಲ್ಲವ ಸಮುದಾಯಕ್ಕೆ ಮಾಡಿದ ಅವಮಾನ. ಪೂಜಾರಿಯವರೆಂದ್ರೆ ತನಗೆ ತಂದೆ ಸಮಾನ. ರಮಾನಾಥ ರೈ ತಮ್ಮನ್ನು ತೀರಾ ಅವಾಚ್ಯವಾಗಿ ನಿಂದಿಸಿದ್ದು ಎಷ್ಟು ಬೇಸರವಾಗಿತ್ತು ಅಂದ್ರೆ ಅವರಿಗಷ್ಟೆ ಗೊತ್ತು ಅನ್ನುವಾಗ ಪೂಜಾರಿಯವರು ದುಃಖ ತಾಳಲಾರದೆ ವೇದಿಕೆಯಲ್ಲೇ ಅತ್ತು ಬಿಟ್ಟರು.
ಈ ವಿದ್ಯಮಾನ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಚಿವ ರಮಾನಾಥ ರೈ ವಿರುದ್ಧ ಆಕ್ರೋಶದ ಮಾತು ಕೇಳಿಬಂದಿದೆ. ನಾಲ್ಕು ತಿಂಗಳ ಹಿಂದೆ ಸಚಿವ ರಮಾನಾಥ ರೈ ಮದುವೆ ಕಾರ್ಯಕ್ರಮವೊಂದರಲ್ಲಿ ಪರೋಕ್ಷವಾಗಿ ನಿಂದಿಸಿ ಮಾತನಾಡಿದ್ದು ಕಾಂಗ್ರೆಸಿಗರಲ್ಲೇ ಅಸಮಾಧಾನ ಸೃಷ್ಟಿಸಿತ್ತು.
ಕಂಕನಾಡಿಯ ಪ್ರಸಿದ್ಧ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಬ್ರಹ್ಮಕಲಶೋತ್ಸವದ ಅಂಗವಾಗಿ ಬುಧವಾರದಂದು ಹಸಿರು ಹೊರೆಕಾಣಿಕೆಯ ಉದ್ಘಾಟನೆಯ ಕಾರ್ಯಕ್ರಮ ನಡೆದಿದ್ದು, ಜನಾರ್ದನ ಪೂಜಾರಿ, ಶಾಸಕ ಜೆರ್ ಲೋಬೋ ಸೇರಿದಂತೆ ಚಿತ್ರನಟ ರಾಜಶೇಖರ್ ಕೋಟ್ಯಾನ್ ಕೂಡಾ ಭಾಗವಹಿಸಿದ್ದರು. ಜನಾರ್ದನ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದ ಬಳಿಕ ರಾಜಶೇಖರ್ ಕೋಟ್ಯಾನ್ ದೀಪ ಬೆಳಗಲು ಮುಂದಾಗಿದ್ದು, ಈ ಸಂಧರ್ಭದಲ್ಲಿ ಜನಾರ್ದನ ಪೂಜಾರಿ ಕೋಟ್ಯಾರ್ ರನ್ನು ತಡೆದರು.
ನನ್ನನ್ನು ಅವ್ಯಾಚವಾಗಿ ನಿಂದಿಸಿದವರ ಪರವಾಗಿ ನೀವು ಇದ್ದೀರಿ. ನೀವು ತಪ್ಪು ಮಾಡಿದ್ದೀರಿ. ನನ್ನ ತಾಯಿಯನ್ನೇ ಅವಮಾನಿಸಿದ ಜನರ ಹಿಂದೆ ಹೋಗಿದ್ದೀರಿ. ಇದನ್ನು ಕ್ಷಮಿಸಲು ಸಾಧ್ಯ ಇಲ್ಲ. ದೇವರಲ್ಲಿ ತಪ್ಪಾಯ್ತು ಎಂದು ಕ್ಷಮೆ ಕೇಳಿದ ಬಳಿಕ ಈ ಕ್ಷೇತ್ರಕ್ಕೆ ಬನ್ನಿ ಎಂದು ಕ್ಲಾಸ್ ತೆಗೆದುಕೊಂಡರು. ಪೂಜಾರಿಯವರ ಈ ಮಾತನ್ನು ಕೇಳಿ ನೆರೆದಿದ್ದವರೆಲ್ಲಾ ವಿಚಲಿತರಾದ್ರು.