ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಅವರು ಚುನಾವಣೆಯಿಂದೆ ಹಿಂದೆ ಸರಿದರೂ ಅವರ ಬಗ್ಗೆ ಜಿಲ್ಲೆಯಲ್ಲಿ ದಿನಕ್ಕೊಂದು ಚರ್ಚೆ ನಡೆಯುತ್ತಿದೆ. ಅಂಬರೀಶ್ ಅವರ ಇಮೇಜ್ ಹಾಳಾಗಲು ಅವರ ಅಕ್ಕಪಕ್ಕದಲ್ಲಿ ಇದ್ದವರೇ ಕಾರಣ. ಅಕ್ಕಪಕ್ಕದಲ್ಲಿದ್ದವರೇ ಅವರನ್ನು ಹಾಳು ಮಾಡಿದ್ರು ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಎಚ್.ಬಿ.ರಾಮು ಪರೋಕ್ಷವಾಗಿ ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ವಿರುದ್ಧ ಹರಿಹಾಯ್ದಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಅಂಬಿ ಉತ್ತಮ ನಟ, ಉತ್ತಮ ವ್ಯಕ್ತಿ. ರಾಜಕಾರಣಕ್ಕೆ ಅವರ ನಡವಳಿಕೆ ಇಷ್ಟವಾಗಲಿಲ್ಲ. ಅವರ ಅಕ್ಕಪಕ್ಕ ಇದ್ದ ಹತ್ತಾರು ಮಂದಿ ಸ್ವಾರ್ಥಕ್ಕಾಗಿ ಅವರನ್ನು ಬಳಸಿಕೊಂಡರು. ಅಂಬಿ ಮೇಲೆ ಜನತೆ ಇಟ್ಟಂತಹ ಪ್ರೀತಿ ವಿಶ್ವಾಸಕ್ಕೆ ತಿಂಗಳಿಗೊಮ್ಮೆಯಾದ್ರೂ ಅವರು ಕಚೇರಿಯಲ್ಲಿ ಕುಳಿತುಕೊಂಡು ಜನಸಾಮಾನ್ಯರ ಕೆಲಸ ಮಾಡಿಸಬೇಕಿತ್ತು. ಆದರೆ ಅದು ಆಗಲಿಲ್ಲ. ಅಂಬಿ ಆಪ್ತರ ಮನೆಯಲ್ಲಿ ಕುಳಿತುಕೊಳ್ಳುತ್ತಿದ್ದೇ ತಪ್ಪಾಗಿದೆ ಎಂದು ಹೇಳಿದ್ದಾರೆ.
ಅಂಬರೀಶ್ ಜೊತೆಯಲ್ಲಿ ಇದ್ದಂತವರಾದ್ರೂ ವ್ಯವಸ್ಥಿತವಾಗಿ ಕೆಲಸ ಮಾಡಿಸಿದ್ದರೆ ಅವರ ಇಮೇಜ್ ಇಷ್ಟು ಹಾಳಾಗುತ್ತಿರಲಿಲ್ಲ. ಅಂಬರೀಶ್ ಅವರು ಕೆಲವರಿಗೆ ಮಾತ್ರ ಸೀಮಿತವಾದರು. ಪಕ್ಕದಲ್ಲಿ ಇದ್ದವರು ಮರ ಬೆಳೆದರೆ ಅದರ ನೆರಳಲ್ಲಿ ಹಲವರು ಇರಬಹುದು ಎಂದು ಯೋಚಿಸಬಹುದಿತ್ತು. ಆದರೆ ಮರವನ್ನು ಪೋಷಿಸುವ ಕೆಲಸ ಪಕ್ಕದಲ್ಲಿದ್ದವರು ಮಾಡಲಿಲ್ಲ ಎಂದ್ರು.
ಅಂಬರೀಶ್ ಅವರು ಕಿವಿ ಮಾತನ್ನು ಹೆಚ್ಚು ಕೇಳುತ್ತಿದ್ದರು. ಕಬ್ಬಿಣ ಯಾವುದು ಚಿನ್ನ ಯಾವುದು ಅವರಿಗೆ ಗೊತ್ತಾಗುತ್ತಿರಲಿಲ್ಲ. ಅವರಲ್ಲಿ ಉದಾರತನವಿತ್ತು ಅದನ್ನು ಜೊತೆಯಲ್ಲಿದ್ದವರು ದುರ್ಬಳಕೆ ಮಾಡಿಕೊಂಡು. ಇದು ತುಂಬಾ ನೋವಾಗುತ್ತೆ ಎಂದು ಅಮರಾವತಿ ಚಂದ್ರಶೇಖರ್ ವಿರುದ್ಧ ಮಾಜಿ ಶಾಸಕ ರಾಮು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಆದ್ರೆ ರಾಮು ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಅಮರಾವತಿ ಚಂದ್ರಶೇಖರ್, ನಾನು ಈ ಬಗ್ಗೆ ನೋಡು ಇಲ್ಲ. ಕೇಳು ಇಲ್ಲ. ಇದರ ಬಗ್ಗೆ ನಾನೇನು ಮಾತನಾಡಲ್ಲ ಎಂದಿದ್ದಾರೆ.