ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಇಂದಿನ ವಿಚಾರಣೆಯನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಅಂತ್ಯಗೊಳಿಸಿದ್ದಾರೆ.
ದೆಹಲಿಯ ಇಡಿ ಕಚೇರಿಯಿಂದ ಹೊರ ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ಇಂದು ವಿಚಾರಣೆಗಾಗಿ ಬೆಳಗ್ಗೆ 11 ಗಂಟೆಗೆ ಬಂದಿದ್ದೆ. ಮಧ್ಯ ಊಟಕ್ಕಾಗಿ ಅರ್ಧ ಗಂಟೆ ಕಳಿಸಿಕೊಟ್ಟಿದ್ದರು. ವಿಚಾರಣೆ ವೇಳೆ ಇಡಿ ಅಧಿಕಾರಿಗಳು ಕೇಳಿಕೆ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಸೋಮವಾರ ಮತ್ತೆ ವಿಚಾರಣೆ ಬರುವಂತೆ ತಿಳಿಸಿದ್ದಾರೆ ಎಂದು ತಿಳಿಸಿದರು.
Advertisement
ನಮ್ಮ ಮನೆ ಸಂಪ್ರದಾಯದ ಪ್ರಕಾರ ಪ್ರತಿ ವರ್ಷದಂತೆ ಈ ಬಾರಿಯೂ ಹಿರಿಯರ ಹಬ್ಬ ಆಚರಿಸಲಾಗುತ್ತದೆ. ಹೀಗಾಗಿ ಸೋಮವಾರ ವಿಚಾರಣೆ ಬೇಡ ಎಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡೆ. ಆದರೆ ಅವರು ಅದಕ್ಕೆ ಒಪ್ಪಿಗೆ ನೀಡಲಿಲ್ಲ. ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಮತ್ತೆ ಸಮನ್ಸ್ ನೀಡಿದ್ದಾರೆ. ನಾನು ಸಂತೋಷದಿಂದ ಸ್ವೀಕರಿಸಿ ಹೊರಗೆ ಬಂದಿದ್ದೇನೆ ಎಂದು ಅಸಮಾಧಾನ ಹೊರಹಾಕಿದರು.
Advertisement
Advertisement
ಬಳಿಕ ಮಾಧ್ಯಮಗಳ ಪ್ರಶ್ನೆಗೆ ಸ್ವಲ್ಪ ಗರಂ ಆದ ಮಾಜಿ ಸಚಿವರು, ಸಮನ್ಸ್ ಕೊಟ್ಟಿದ್ದಾರಪ್ಪಾ… ವಕೀಲರನ್ನ ಭೇಟಿಯಾಗಬೇಕು. ದಾಖಲೆ ಸಿದ್ಧಮಾಡಿಕೊಳ್ಳಬೇಕು, ಊರಿಗೆ ಹೋಗಬೇಕು, ನೀವು ಹೇಳಿದಂಗ ಕೇಳಬೇಕು, ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಏನ್ ಮಾಡೋಕೆ ಆಗುತ್ತೆ ಎಲ್ಲವನ್ನೂ ಎದುರಿಸಬೇಕಿದೆ ಅಷ್ಟೇ ಎಂದು ಹೇಳಿದರು.
Advertisement
ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ದೆಹಲಿಯ ಕಚೇರಿಯಲ್ಲಿ ಶುಕ್ರವಾರ ಸತತ 4 ಗಂಟೆ 45 ನಿಮಿಷ ವಿಚಾರಣೆ ನಡೆಸಿ ರಾತ್ರಿ ಸುಮಾರು 11:30ಕ್ಕೆ ವಿಚಾರಣೆ ಅಂತ್ಯಗೊಳಿಸಿದ್ದರು. ಆದರೆ ಶನಿವಾರ ಬೆಳಗ್ಗೆ 11ರಿಂದ ರಾತ್ರಿ ಸುಮಾರು 8:30ರ ವರೆಗೂ ವಿಚಾರಣೆ ನಡೆಸಲಾಗಿತ್ತು.
ಏನಿದು ಪ್ರಕರಣ?
2017ರ ಆಗಸ್ಟ್ 2 ರಂದು ದೆಹಲಿಯ ಡಿಕೆ ಶಿವಕುಮಾರ್ ಆಪ್ತರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ದಾಖಲೆ ಇಲ್ಲದ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ವಿಚಾರಣೆ ವೇಳೆ ಡಿಕೆಶಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಐಟಿ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅಪಾರ್ಟ್ ಮೆಂಟ್‍ನಲ್ಲಿ ಪತ್ತೆ ಹಣದ ಜತೆಗೆ ಹವಾಲಾ ಮೂಲಕ ಏಜೆಂಟ್‍ಗಳ ಸಹಾಯದಿಂದ ಡಿಕೆ ಶಿವಕುಮಾರ್ ಕೋಟ್ಯಂತರ ರೂ.ಗಳನ್ನು ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ನೋಟು ನಿಷೇಧಗೊಂಡ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಸಾವಿರಾರು ಕೋಟಿ ರೂ.ಗಳನ್ನು ಬದಲಾಯಿಸಿದ್ದಾರೆ. ಆಪ್ತರ ಮೂಲಕ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ವಿದೇಶದಲ್ಲೂ ಡಿಕೆಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.
ಇಡಿ ಸಮನ್ಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಸೇರಿದಂತೆ ಗೆಳೆಯರಾದ ಆಂಜನೇಯ, ರಾಜೇಂದ್ರ, ಹನುಮಂತಯ್ಯ ಸಲ್ಲಿಸಿದ್ದ ತಕಾರರು ಅರ್ಜಿಯನ್ನು ಹೈಕೋರ್ಟ್ ನ್ಯಾ. ಅರವಿಂದ್ ಕುಮಾರ್ ಗುರುವಾರ ವಜಾಗೊಳಿಸಿ ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿದ್ದರು. ಅರ್ಜಿ ವಜಾಗೊಂಡ ಬೆನ್ನಲ್ಲೇ ಗುರುವಾರ ರಾತ್ರಿ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿ ಶುಕ್ರವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಿದ್ದರು.