ಕಲಬುರಗಿ: ಗನ್ ಹಿಡಿದು ದುರಂಧರ್ ಚಿತ್ರದ ಸ್ಟೈಲ್‌ನಲ್ಲಿ ಡಾನ್ಸ್ ಮಾಡಿದ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಅವರು, ಯಾರೇ ಇದ್ರೂ ಕ್ರಮ ತೆಗೆದುಕೊಳ್ಳುತ್ತೇವೆ. ಯಾರಾದ್ರೂ ಸರಿ, ಕಾನೂನಿಗೆ ವಿರುದ್ಧವಾಗಿ ಚಟುವಟಿಕೆ ಮಾಡಿದ್ರೆ ಕ್ರಮ ತೆಗೆದುಕೊಳ್ಳುತ್ತೇವೆ. ಅವರು ಯಾವ ಪಕ್ಷದವ್ರು ಅನ್ನೋದು ಆಮೇಲೆ, ಮೊದಲು ಕಾನೂನು ಕ್ರಮ ತಗೊಂಡೇ ತಗೊಳ್ತೇವೆ. ಅವರು ಯಾರ ಆಪ್ತರೇ ಆಗಿದ್ದರೂ, ಯಾರೂ ಕೂಡ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಿ ಅಂತ ಆಪ್ತರು ಹೇಳಲ್ಲ. ಕಾನೂನಿನಲ್ಲಿ ಏನು ಕ್ರಮ ಇದೆಯೋ ಅದರಂತೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೈಗಾರಿಕಾ ಕಾರಿಡಾರ್; ಬೆಂಗಳೂರಿನಿಂದ ಮಂಗಳೂರಿಗೆ ವಿಸ್ತರಿಸಲು ಹೆಚ್.ಡಿ.ದೇವೇಗೌಡ ಸಲಹೆ
ಇನ್ನೂ ಬೈರತಿ ಬಸವರಾಜು ತಲೆಮರೆಸಿಕೊಂಡಿರುವ ವಿಚಾರ ಬಗ್ಗೆ ಮಾತಾಡಿ, ಅವರಾಗಿ ಅವರೇ ಬಂದು ಸರೆಂಡರ್ ಆದ್ರೆ ಒಳ್ಳೆದು. ಇಲ್ಲಾಂದ್ರೆ ಪೊಲೀಸರು ಅವರನ್ನು ಹುಡುಕ್ತಾರೆ ಎಂದಿದ್ದಾರೆ.
ವಿಧಾನಸೌಧದಲ್ಲಿ ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಚಿನ್ನ, ಹಣದ ಬ್ಯಾಟ್ ನಾಪತ್ತೆ ಆರೋಪ ಪ್ರಕರಣದ ಬಗ್ಗೆ ಖುದ್ದು ಗೃಹ ಸಚಿವ ಪರಮೇಶ್ವರ್ ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಲಾಗಿದೆ. ವಿಧಾನಸೌಧದ ಗೇಟ್‌ನಿಂದ ಆ ಬ್ಯಾಗ್ ಹೇಗೆ ಒಳಗೆ ಹೋಯ್ತು, ಯಾವ ಗೇಟ್‌ನಿಂದ ಒಳಗೆ ಹೋಯ್ತು ಅನ್ನೋದು ಮುಖ್ಯ. ಒಬ್ಬ ಸಚಿವರ ಕೊಠಡಿವರೆಗೆ ಆ ಬ್ಯಾಗ್ ಹೋಗುತ್ತೆ ಅಂದ್ರೆ, ಅದೂ ಯಾರಿಗೂ ಗೊತ್ತಾಗದೇ ಬ್ಯಾಗ್ ತಗೊಂಡ್ ಹೋಗಿದ್ದಾರೆ. ಅದನ್ನೆಲ್ಲ ಪತ್ತೆ ಮಾಡಲು ಜಂಟಿ ಪೊಲೀಸ್ ಆಯುಕ್ತರಿಗೆ ಸೂಚನೆ ಕೊಟ್ಟಿದ್ದೇವೆ. ಕಳವು ಆಗಿರೋದು ಎರಡನೇ ವಿಚಾರ. ಆ ಬ್ಯಾಗ್ ಹೇಗೆ ಒಳಗೆ ತಂದ್ರು ಅನ್ನೋದು ನೋಡಬೇಕು. ನವೀನ್ ಅನ್ನೋ ವ್ಯಕ್ತಿ ವಿಧಾನಸೌಧದ ಒಳಗೆ ಬ್ಯಾಗ್ ತಗೊಂಡ್ ಹೋಗಿರೋದು. ಇದರ ತನಿಖೆ ಮಾಡ್ತೇವೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಎನ್.ಎಂ.ಡಿ.ಸಿ ಅಕ್ರಮ ಅದಿರು ರವಾನೆ ತನಿಖೆಗೆ ಈಶ್ವರ್ ಖಂಡ್ರೆ ಆದೇಶ

