ಬೆಂಗಳೂರು: ಅಕ್ರಮ ಹಣಕಾಸು ವ್ಯವಹಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಮಾಜಿ ಸಚಿವರ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಸಿಕ್ಕ ಹಣವು ಭ್ರಷ್ಟಾಚಾರದಿಂದ ಬಂದಿದ್ದಾ ಎನ್ನುವ ಅನುಮಾನ ಶುರುವಾಗಿದೆ. ಹೀಗಾಗಿ ಇದನ್ನು ಪತ್ತೆಹಚ್ಚಲು ಜಾರಿ ನಿರ್ದೇಶನಾಲಯ ಸಿಬಿಐ ನೆರವನ್ನು ಕೋರಿತ್ತು. ಇಡಿ ಮನವಿಯನ್ನು ಪರಿಗಣಿಸಿದ ಸಿಬಿಐ, ತನಿಖೆ ನಡೆಸಲು ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರಕ್ಕೆ ಬರೆದಿತ್ತು. ಸಿಬಿಐ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರದ ಗೃಹ ಇಲಾಖೆಯು ಮಾಜಿ ಸಚಿವರ ಮೇಲೆ ತನಿಖೆಗೆ ಅನುಮತಿಯನ್ನು ನೀಡಿದೆ. ಈ ಮೂಲಕ ಸಿಬಿಐ ಮೊದಲಿಗೆ ಪ್ರಾಥಮಿಕ ತನಿಖೆ ನಡೆಸಲಿದೆ ಎಂದು ತಿಳಿದು ಬಂದಿದೆ.
ಇಡಿ ಬಂಧನಕ್ಕೆ ಒಳಗಾಗಿರುವ ಡಿ.ಕೆ.ಶಿವಕುಮಾರ್ ಅವರು ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ. ಮಾಜಿ ಸಚಿವರ ನ್ಯಾಯಾಂಗ ಬಂಧನದ ಅಕ್ಟೋಬರ್ 1ರಂದು ಮುಕ್ತಾಯವಾಗಿತ್ತು. ಹೀಗಾಗಿ ಅಂದು ಅವರನ್ನು ಕೋರ್ಟಿಗೆ ಕರೆತರಲಾಗಿತ್ತು. ಕೋರ್ಟಿನಲ್ಲಿ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು ಅಕ್ಟೋಬರ್ 15 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶ ನೀಡಿದ್ದಾರೆ. ಅಕ್ಟೋಬರ್ 14ಕ್ಕೆ ದೆಹಲಿಯ ಹೈಕೊರ್ಟಿನಲ್ಲಿ ಡಿಕೆಶಿ ಜಾಮೀನು ಅರ್ಜಿ ವಿಚಾರಣೆಗೆ ನಡೆಯಲಿದೆ.