ಎತ್ತು ಏರಿಗೆ, ಕೋಣ ನೀರಿಗೆ: ಕೇಂದ್ರ, ರಾಜ್ಯ ಸರ್ಕಾರ ವಿರುದ್ಧ ಸಿಎಂ ಇಬ್ರಾಹಿಂ ಕಿಡಿ

Public TV
2 Min Read
PM Moid CM Ibrahim BSY

– ರೇಣುಕಾಚಾರ್ಯ ನೆಲದ ಮೇಲೆ ಬೋಟ್ ಓಡಿಸ್ತಾರೆ
– ಅನರ್ಹ ಶಾಸಕರ ಬಗ್ಗೆಯೂ ‘ಕೈ’ ಮುಖಂಡ ವ್ಯಂಗ್ಯ

ಬೆಂಗಳೂರು: ಎತ್ತು ಏರಿಗೆ ಇಳಿದರೆ ಕೋಣ ನೀರಿಗೆ ಇಳಿಯಿತಂತೆ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಾ ಹೋದರೆ ರಾಜ್ಯದಲ್ಲಿ ವ್ಯತಿರಿಕ್ತ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಪರಿಹಾರ ಲೆಕ್ಕಾಚಾರ ಸರಿಯಾಗಿ ಕೊಟ್ಟಿಲ್ಲ. ಅದಕ್ಕೆ ಪುನಃ ಸಮೀಕ್ಷೆ ಮಾಡಬೇಕು ಎಂದು ನಳಿನ್ ಕುಮಾರ್ ಕಟೀಲ್ ಹೇಳುತ್ತಾರೆ. ದಯವಿಟ್ಟು ಆ ಭಾಗದ ಜನರ ಕೂಗನ್ನು ಆಲಿಸಿ ಎಂದು ಹೇಳಿದರು.

CM Ibrahim

ರಾಜ್ಯ ಹಾಗೂ ಕೇಂದ್ರದ ನಡುವೆ ಸಮನ್ವಯತೆ ಭಾರೀ ಚೆನ್ನಾಗಿದೆ. ಸತ್ತರೂ ಮಾತಾಡಬೇಡ ಎಂದು ಹೇಳುತ್ತಾರೆ. ಇದು ಖಾಮೋಷ್.. ಖಾಮೋಷ್ ಸರ್ಕಾರ, ಬೈಠಕ್ ಸರ್ಕಾರ. ಬಿಎಸ್ ಯಡಿಯೂರಪ್ಪ ಸರ್ಕಾರ ಎದ್ದೇಳಲೇ ಇಲ್ಲ ಎಂದು ವ್ಯಂಗ್ಯವಾಡಿದರು.

ಅನರ್ಹ ಶಾಸಕರ ಬಗ್ಗೆ ವ್ಯಂಗ್ಯವಾಡಿದ ಸಿಎಂ ಇಬ್ರಾಹಿಂ, 17 ಜನ ಪತಿವ್ರತರು ಹೋಗಿಬಿಟ್ಟಿದ್ದಾರೆ. ಅವರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಹೀಗಾಗಿ ಎಲ್ಲರೂ ಚುನಾವಣೆ ಕಡೆಗೆ ಗಮನ ಹರಿಸುತ್ತಾರೆ. ಇದರಿಂದಾಗಿ ಪ್ರವಾಹ ಸಂತ್ರಸ್ತರ ಕಥೆ ಅಷ್ಟೇ. ಪರಿಹಾರ ವಿತರಣೆ ಆಗುವವರೆಗೆ ಉಪ ಚುನಾವಣೆ ಮುಂದೂಡಬೇಕು. ಇದರಿಂದ ಯಾವುದೇ ತೊಂದರೆ ಆಗಲ್ಲ. ಒಂದು ವೇಳೆ ಉಪ ಚುನಾವಣೆ ನಡೆದು, ಅನರ್ಹರು ಗೆದ್ದು ಬಂದರೆ ಸಚಿವ ಸ್ಥಾನಕ್ಕೆ ಕಿತ್ತಾಡುತ್ತಾರೆ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕನ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕಾಂಗ ನಾಯಕರಿದ್ದಾರೆ. ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಚರ್ಚೆ ನಡೆದಿದ್ದು, ಅಕ್ಟೋಬರ್ 10 ರೊಳಗೆ ಆಯ್ಕೆ ಪ್ರಕಟಿಸಲಾಗುತ್ತದೆ ಎಂದರು.

ವಿರೋಧ ಪಕ್ಷದ ನಾಯಕನ ಯಾರಾಗಬೇಕು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರದ ಹೆಣ ಹೊರುವುದಕ್ಕೆ ಯಾರಾದರೇನು? ಹೆಣ ಹೊರುವುದಕ್ಕೆ ನಾಲ್ಕು ಜನ ಬೇಕು. ದೆಹಲಿಗೆ ಹೋಗುವುದಕ್ಕೆ ರಾಜ್ಯ ಬಿಜೆಪಿ ನಾಯಕರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಂದ ವೀಸಾ ಪಡೆಯಬೇಕು. ಸಿದ್ದರಾಮಯ್ಯ ಅವರು ಅಂತಹ ಪರಿಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮುಂದೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾತನಾಡುವುದಕ್ಕೆ ಆಗುವುದಿಲ್ಲ. ಕನಿಷ್ಠ ರಾಜ್ಯಪಾಲರ ಮುಂದೆ ಸಮಸ್ಯೆ ಹೇಳಿಕೊಳ್ಳಬಹುದಿತ್ತು. ಇಲ್ಲವೇ ಕೈಸೇ ಹೇ… ಮನ್ ಕಿ ಬಾತ್… ಮಾಡಬಹುದಿತ್ತು ಎಂದು ಲೇವಡಿ ಮಾಡಿದರು.

RENUKACHARYA A

ನೀರಿನಲ್ಲಿ ಬೋಟ್ ಓಡಿಸುವವರನ್ನ ನೋಡಿದ್ದೇನೆ. ಆದರೆ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ನೆಲದ ಮೇಲೆ ಬೋಟ್ ಓಡಿಸುತ್ತಾರೆ ಎಂದು ಕಿಚಾಯಿಸಿದರು.

ಬಾಯಿ ಬಿಗಿ ಹಿಡಿದು ಮಾತನಾಡಿ ಅಂತ ರೇಣುಕಾಚಾರ್ಯ ಹೇಳುತ್ತಾರೆ. ಬಾಯಿ ಹಿಡಿಬೇಕೋ, ಸೊಂಡಿಲು ಹಿಡಿಬೇಕೋ ಗೊತ್ತಿಲ್ಲ. ಅವರ ಹೆಸರೇ ರೇಣುಕಾಚಾರ್ಯ. ರೇಣುಕಾ ಪ್ರಸಾದದಿಂದ ಹುಟ್ಟಿದವರು. ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಮುಂದೆ ಕರೆದುಕೊಂಡು ಹೋಗುವ ಸಾಹಸ ಮಾಡಲಿ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *