– ಸುಮಾರು 60 ಸಂಸದರಿಂದ ಬೀಫ್ ಫ್ಯಾಕ್ಟರಿ ನಿರ್ಮಾಣ
– ಜಾಧವ್‍ಗೆ ಅಂಬಾನಿ, ಅದಾನಿ ದುಡ್ಡು ಬಂದಿದೆ
ಯಾದಗಿರಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಬೀಫ್ ಮಾರಾಟ ಜಾಸ್ತಿಯಾಗಿದೆ. ಸುಮಾರು 60 ಸಂಸದರು ಬೀಫ್ ಫ್ಯಾಕ್ಟರಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಆರೋಪಿಸಿದ್ದಾರೆ.
ಚಿಂಚೋಳಿ ತಾಲೂಕಿನ ಅರಣಕಲ್ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಿಂದೂ-ಮುಸ್ಲಿಮರು ಒಂದಾಗಿ ಬಾಳುವಂತೆ ಮಾಡು ಅಂತ ನಾನು ದೇವರಲ್ಲಿ ಕೇಳುತ್ತೇನೆ. ರಂಜಾನ್ ತಿಂಗಳಿನಲ್ಲಿ ನಾನು ಸುಳ್ಳು ಹೇಳುವುದಿಲ್ಲ. ಮೋದಿ ನೀ ಹೋದಿ, ನೀ ಬರೋ ಪ್ರಶ್ನೆಯೇ ಇಲ್ಲ, ಮೋದಿ ಬೂದಿ. ಮೇ 23ರ ನಂತರ ದೇಶಕ್ಕೆ ಶುಭ ದಿನ ಬರುತ್ತದೆ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಅವರು 1996ರಿಂದಲೂ ನಮ್ಮ ಜೊತೆಗಿದ್ದಾರೆ. ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರಿಗೆ ಈಗಾಗಲೇ ಉದ್ಯಮಿಗಳಾದ ಅದಾನಿ ಹಾಗೂ ಅಂಬಾನಿ ಅವರ ಹಣ ಬಂದಿದೆ. ಪ್ರಧಾನಿ ಮೋದಿ ಅವರು ಊರಿಗೆ ಊರೇ ಮಾರುತ್ತಿದ್ದಾರೆ. ಇದನ್ನು ತೋರಿಸಲು ಯಾವುದೇ ರಾಷ್ಟ್ರೀಯ ಮಾಧ್ಯಮಗಳು ಮುಂದಾಗುತ್ತಿಲ್ಲ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಾಚ್, ಬೂಟ್ ಹಾಕಿದರೆ ತೋರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಆದರೆ ವೀರಶೈವರೇ ಬರೆದಿಟ್ಟುಕೊಳ್ಳಿ, ಬಿ.ಎಸ್.ಯಡಿಯೂರಪ್ಪನವರು ಅಧಿಕಾರದಲ್ಲಿ ಮುಂದಿದ್ದಾರೆ. ಆದರೆ ಬಿ.ಎಲ್.ಸಂತೋಷ್ ಅವರು ಯಡಿಯೂರಪ್ಪರನ್ನು ಹಿಂದೆ ಸರಿಸುತ್ತಾರೆ ಎಂದರು.