ಬೆಂಗಳೂರು: ಹಿಂದೂ ಹಿಂದೂ ಎಂದು ಹೇಳುವವರು ಗಣೇಶ ಹಬ್ಬದ ದಿನ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ತಂದೆಗೆ ಎಡೆ ಇಡಲು ಬಿಡುತ್ತಿದ್ದರೆ ಏನಾಗುತ್ತಿತ್ತು ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಾಶಕಾಲೇ ವಿಪರೀತ ಬುದ್ಧಿ. ಇದರಿಂದ ಅವರು ಏನಾದರೂ ಕಾಂಗ್ರೆಸ್ಸನ್ನು ಧಮನ ಮಾಡಬೇಕು ಎಂಬ ಕನಸು ಕಂಡಿದ್ದರೆ ಅದು ಹಗಲು ಕನಸಾಗಿರುತ್ತದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಹಿಂದೂ ಹಿಂದೂ ಎಂದು ಹೇಳುವವರು ಗಣೇಶ ಹಬ್ಬದಂದು ಒಂದು ದಿನವಾದರೂ ಅವರ ತಂದೆಗೆ ಎಡೆ ಇಡುವುದಕ್ಕೆ ಬಿಡುತ್ತಿದ್ದರೆ ಏನಾಗುತ್ತಿತ್ತು. ಎರಡು ವರ್ಷ ಸುಮ್ಮನಿದ್ರಲ್ವಾ. ಇದೊಂದು ಅಮಾನ್ಯವಾದಂತಹ ಕ್ರಮವಾಗಿದೆ ಎಂದು ಡಿಕೆಶಿ ಬಂಧನವನ್ನು ಸಿಎಂ ಇಬ್ರಾಹಿಂ ಖಂಡಿಸಿದರು.
ಅಮಾನ್ಯವಾದಂತಹ ಈ ಕ್ರಮವನ್ನು ಕರ್ನಾಟಕ ರಾಜ್ಯದ ಆರೂವರೆ ಕೋಟಿ ನೋಡುತ್ತಿದ್ದಾರೆ. ಇಂದು ಪಕ್ಷ ಡಿಕೆಶಿ ಅವರ ಪರವಾಗಿ ನಿಂತಿದೆ. ಸಿದ್ದರಾಮಯ್ಯ ಅವರ ನಿರ್ದೇಶನದಂತೆ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತದೆ ಎಂದರು.
ದೆಹಲಿಯ ಫ್ಲ್ಯಾಟ್ ನಲ್ಲಿ ಸಿಕ್ಕ 8.59 ಕೋಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳ ವಿಚಾರಣೆಯ ನಂತರ ಮಂಗಳವಾರ ರಾತ್ರಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬಳಿಕ ವೈದ್ಯಕೀಯ ಪರೀಕ್ಷೆಗೆಂದು ದೆಹಲಿಯ ಆರ್‍ಎಂಎಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇತ್ತ ರಾಜ್ಯದಲ್ಲಿ ಡಿಕೆಶಿ ಬಂಧನವನ್ನು ಖಂಡಿಸಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.