ಬೆಂಗಳೂರು: ಕಾಂಗ್ರೆಸ್ ನಾಯಕರು `ಮುಖ್ಯಮಂತ್ರಿ ಮಾತು ಆ್ಯಪ್’ ಅನ್ನು ಬಿಡುಗಡೆ ಮಾಡಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ಈ ಆ್ಯಪ್ ಬಿಡುಗಡೆ ಮಾಡಿದ್ದು, ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಚುನಾವಣೆ ಉಸ್ತುವಾರಿ ವೇಣುಗೋಪಾಲ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಡಿಕೆಶಿವಕುಮಾರ್, ಜಾರ್ಜ್ ರಿಂದ ಆ್ಯಪ್ ಬಿಡುಗಡೆ ಮಾಡಿಸಲಾಗಿದೆ.
ಕರ್ನಾಟಕದ ಹೆಮ್ಮೆ ಕಾಂಗ್ರೆಸ್ ಮತ್ತೊಮ್ಮೆ ಅನ್ನೊ ಟ್ಯಾಗ್ ಲೈನ್ ಕೂಡ ಇದೆ. ಈ ಆ್ಯಪ್ ನಲ್ಲಿ ಮುಖ್ಯಮಂತ್ರಿಗಳ ಮಾತು, ಸಿದ್ದರಾಮಯ್ಯ ಭಾಷಣದ ವಿಡಿಯೋ ಲಭ್ಯವಾಗುತ್ತದೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಸರ್ಕಾರದ ಸಾಧನೆ ಮತ್ತು ಮುಂದಿನ ದಿನಗಳ ವಿಷನ್ ಕುರಿತಾತ ವಿಡಿಯೋ ಲಭ್ಯವಾಗುತ್ತದೆ. ಈ ಆ್ಯಪ್‍ನಲ್ಲಿ ಸಿಎಂ ಫೋಟೋ ಸ್ಕ್ಯಾನ್ ಮಾಡಿದರೆ ಸಿದ್ದರಾಮಯ್ಯ ಅವರ ಭಾಷಣ ಲಭ್ಯವಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈ ಆ್ಯಪ್ ನಿರ್ಮಾಣ ಮಾಡಲಾಗಿದ್ದು, ಆಗ್ನೆಂಟೆಡ್ ರಿಯಾಲಿಟಿ ತಂತ್ರಜ್ಞಾನದ ಆ್ಯಪ್ ಆಗಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಮಾತನಾಡಿ, ತಂತ್ರಜ್ಞಾನ ಬೆಳೆಯಲು ಕಾಂಗ್ರೆಸ್ ಪಕ್ಷ ಕಾರಣ. ಪ್ರಜಾಪ್ರಭುತ್ವದಲ್ಲಿ 5 ವರ್ಷಕ್ಕೆ ಚುನಾವಣೆ ನಡೆಯುತ್ತದೆ. ಮತದಾರರ ನಿರೀಕ್ಷೆಗೆ ತಕ್ಕಂತೆ ಸರ್ಕಾರಗಳು ಕೆಲಸ ಮಾಡಬೇಕು. ಆಡಳಿತದಲ್ಲಿ ಪಾರದರ್ಶಕತೆ, ಅಭಿವೃದ್ಧಿ ಕೆಲಸವನ್ನು ಸರ್ಕಾರ ಮಾಡಬೇಕು. 2013ರಲ್ಲಿ ನಮ್ಮ ಸರ್ಕಾರ ನೀಡಿದ ಎಲ್ಲಾ ಭರವಸೆ ಈಡೇರಿಸಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು. ವಿನೂತನ ತಂತ್ರಜ್ಞಾನ ಬಳಸಿಕೊಂಡು ಚುನಾವಣೆ ಪ್ರಚಾರ ಮಾಡುತ್ತೀವಿ. ಮತ್ತೆ ರಾಜ್ಯದ ಜನ ನಮಗೆ ಆಶೀರ್ವಾದ ಮಾಡುತ್ತಾರೆ ಅಂತ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ರಾಜ್ಯದ ಜನ ಅನ್ನ, ನೀರು ಕೊಟ್ಟವರನ್ನ ಕೈ ಬಿಡೊಲ್ಲ. ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಸುಳ್ಳು ಹೇಳಿ ಜನರನ್ನ ದಾರಿ ತಪ್ಪಿಸಲು ಸಾಧ್ಯವಿಲ್ಲ. ಅಮಿತ್ ಶಾ, ಮೋದಿ, ಯಡಿಯೂರಪ್ಪ ಬರೀ ಸುಳ್ಳು ಹೇಳುತ್ತಾರೆ. ಕೇಂದ್ರದಲ್ಲಿ ಅವರ ಸಾಧನೆ ಇಲ್ಲ, ರಾಜ್ಯದಲ್ಲೂ ಸಾಧನೆ ಇಲ್ಲ. ಜೈಲಿಗೆ ಹೋಗಿದ್ದೇವೆ ಅಂತ ಹೇಳಲು ಆಗೊಲ್ಲ. ಅದಕ್ಕಾಗಿ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಜೆಡಿಎಸ್ ಗೆ ರಾಜ್ಯದಲ್ಲಿ ಶಕ್ತಿ ಇಲ್ಲ. ಕೆಲ ಜಿಲ್ಲೆಯಲ್ಲಿ ಮಾತ್ರ ಜೆಡಿಎಸ್ ಇದೆ. ಅತಂತ್ರ ವಿಧಾನಸಭೆ ಆಗಲಿ ಅಂತ ಜೆಡಿಎಸ್ ಕಾಯುತ್ತಿದೆ. ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಅಂತ ಕನಸ್ಸು ಕಾಣುತ್ತಿದ್ದಾರೆ. ಅದು ಕನಸಾಗೇ ಇರುತ್ತದೆ. ಅವರು ಅಧಿಕಾರಕ್ಕೆ ಬರೊಲ್ಲ. ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಎಂದ್ರು.