ಬಳ್ಳಾರಿ: ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದುಕೊಂಡು ಗೆದ್ದು ಶಾಸಕನಾಗಿದ್ದೇನೆ. ಹೀಗಾಗಿ ಕಷ್ಟ ಬಂದರೂ ಕಾಂಗ್ರೆಸ್ಸಿನಲ್ಲಿಯೇ ಇರುತ್ತೇನೆ ಎಂದು ಕಂಪ್ಲಿ ಗಣೇಶ್ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಕಂಪ್ಲಿ ಗಣೇಶ್, ನಾವು ಕಾಂಗ್ರೆಸ್ ಪಕ್ಷದಲ್ಲಿ ಇರುತ್ತೇವೆ. ಕಾಂಗ್ರೆಸ್‍ಗೆ ಎಷ್ಟೇ ಕಷ್ಟ ಬಂದರೂ ಇಲ್ಲೇ ಇರುತ್ತೇನೆ. ಇದು ಸ್ವತಂತ್ರ ಪೂರ್ವದಿಂದ ಬಂದಂತಹ ಪಕ್ಷವಾಗಿದೆ. ನಮ್ಮ ಪಕ್ಷ ನಮಗೆ ಟಿಕೆಟ್ ಕೊಟ್ಟು ಗೆಲ್ಲಿಸಿದೆ. ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಹೀಗಾಗಿ ಕಷ್ಟ ಬಂದರೂ ನಾವು ಕಾಂಗ್ರೆಸ್‍ನಲ್ಲಿಯೇ ಇರುತ್ತೇವೆ ಎಂದಿದ್ದಾರೆ.
ನಾವು ಅಧಿಕಾರದಲ್ಲಿದ್ದರೂ ಕಾಂಗ್ರೆಸ್‍ನಲ್ಲಿಯೇ ಇರುತ್ತೇವೆ. ನಾನು ಯಾವ ಅತೃಪ್ತ ಶಾಸಕರ ಸಂಪರ್ಕದಲ್ಲಿ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ್ ಫೋನ್ ಮಾಡಿ ಸಭೆಗೆ ಕರೆದಿದ್ದಾರೆ. ಹೀಗಾಗಿ ಮಂಗಳವಾರ ಬೆಂಗಳೂರಿನಲ್ಲಿ ಸಿಎಲ್‍ಪಿ ಸಭೆಗೆ ಹಾಜರಾಗುತ್ತೇನೆ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದರು.
ಎಂತಹುದೇ ಸಂದರ್ಭದಲ್ಲಿ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಕಳೆದೊಂದು ತಿಂಗಳಿನಿಂದಲೂ ಕ್ಷೇತ್ರದಲ್ಲಿ ವಾರ್ಡ್ ಸಭೆಗಳನ್ನ ನಡೆಸುತ್ತಿದ್ದೇನೆ. ನಾನು ಗೆದ್ದಾಗಿನಿಂದಲೂ ಪಕ್ಷ ಬಿಡುತ್ತೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅಂತಹ ಉಹಾಪೋಹಗಳಿಗೆ ಕ್ಷೇತ್ರದ ಜನರು ಕಿವಿಗೊಡಬಾರದು ಎಂದು ಗಣೇಶ್ ಹೇಳಿದರು.