ಬೆಂಗಳೂರು: ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಂಪುಟ ರಚನೆಯಾಗುತ್ತಿದ್ದಂತೆ ಭಿನ್ನಮತ ಸ್ಫೋಟಗೊಂಡಿದೆ.
ಸಚಿವ ಸ್ಥಾನ ಕೈತಪ್ಪಿದ ಉಭಯ ಪಕ್ಷಗಳಲ್ಲಿನ ಆಕಾಂಕ್ಷಿಗಳು ರೊಚ್ಚಿಗೆದ್ದಿದ್ದು, ಕೆಲವರು ಪಕ್ಷ ಬಿಡುವ ಮಾತುಗಳನ್ನಾಡಿದ್ದಾರೆ. ತಮ್ಮ ಬೆಂಬಲಿಗರ ಜೊತೆ ಪ್ರತ್ಯೇಕ ಸಭೆ ನಡೆಸಿದ ಎಂ.ಬಿ ಪಾಟೀಲ್, ಎಚ್.ಕೆ ಪಾಟೀಲ್, ಕಾಂಗ್ರೆಸ್ ಹೈಕಮಾಂಡ್ ಗೆ 3 ದಿನಗಳ ಕಾಲಾವಕಾಶ ನೀಡಿದ್ದಾರಂತೆ. ಅಷ್ಟರಲ್ಲಿ ಕ್ಷೇತ್ರಕ್ಕೆ ಹೋಗಿ ಅಲ್ಲಿ ಬೆಂಬಲಿಗರ ಜೊತೆ ಮಾತನಾಡಿ, ಪಕ್ಷಕ್ಕೆ ರಾಜೀನಾಮೆ ಕೊಡಬೇಕಾ ಅಥವಾ ಬೇರೆ ಪಕ್ಷಕ್ಕೆ ಹೋಗಬೇಕಾ ಎಂಬುದರ ಬಗ್ಗೆ ತೀರ್ಮಾನಿಸುತ್ತೇವೆ ಅಂತ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.
ಕುಂದಗೋಳ ಶಾಶಕ ಶಿವಳ್ಳಿ, ಪಕ್ಷದಲ್ಲಿ ನನಗೆ ನ್ಯಾಯ ಸಿಗೋವರೆಗೂ ಬಿಡಲ್ಲ ಎಂದಿದ್ದಾರೆ. ಈ ಮಧ್ಯೆ ಸತೀಶ ಜಾರಕಿಹೊಳಿ, ಹ್ಯಾರಿಸ್, ಬಿ.ಸಿ. ಪಾಟೀಲ, ಬಿ. ನಾಗೇಂದ್ರ ಸೇರಿದಂತೆ ಅತೃಪ್ತ ಶಾಸಕರು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ಸಭೆ ನಡೆಸಿ, ಮುಂದಿನ ನಡೆಯ ಕುರಿತು ಚರ್ಚಿಸಿದ್ದಾರೆ.
ಸಭೆ ಬಳಿಕ ಮಾತನಾಡಿದ ನಾಯಕರು ಇದು ಅತೃಪ್ತರ ಸಭೆಯಲ್ಲ. ಸ್ನೇಹಿತರ ಸಭೆ ಕ್ಷೇತ್ರದ ಜನತೆ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎನ್ನುವ ಮೂಲಕ ಪರೋಕ್ಷವಾಗಿ ರಾಜೀನಾಮೆ ನೀಡುತ್ತೇವೆ ಅಂತಾ ಎಚ್ಚರಿಸಿದ್ದಾರೆ.