-ಸಮ್ಮಿಶ್ರ ಸರ್ಕಾರಕ್ಕೆ ಉತ್ತರ ಕರ್ನಾಟಕ ಕಾಣಿಸುತ್ತಿಲ್ಲ
ಬೆಂಗಳೂರು: ರಾಜ್ಯದಲ್ಲಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಕೇವಲ ರಾಮನಗರ, ಮಂಡ್ಯ ಹಾಗೂ ಹಾಸನಕ್ಕೆ ಮಾತ್ರ ಸೀಮಿತ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಹಾಸನ, ಮಂಡ್ಯ ಹಾಗೂ ರಾಮನಗರಕ್ಕೆ ಮಾತ ಸಮ್ಮಿಶ್ರ ಸರ್ಕಾರಕ್ಕೆ ಸೀಮಿತವಾಗಿದೆ. ಪ್ರತಿ ಕ್ಯಾಬಿನೆಟ್ ನಲ್ಲಿಯೂ ಹೆಚ್ಚು ಹಣ ಅಲ್ಲಿಗೆ ನೀಡುತ್ತಾರೆ. ಈವರೆಗೆ ಹಲವು ಕ್ಯಾಬಿನೆಟ್ ಮೀಟಿಂಗ್ ನಡೆದಿವೆ. ಎಲ್ಲದರಲ್ಲಿಯೂ ಅಗ್ರಪಾಲು ಈ ಮೂರು ಜಿಲ್ಲೆಗಳಿಗೆ ಮಾತ್ರ ಇದೆ. ಅಲ್ಲದೇ ಸಿಎಂ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಿದಾಗಲೂ, ಅಲ್ಲಿಗೆ ಸಿಂಹಪಾಲು ನೀಡಿದ್ದರು. ಹೀಗಾಗಿ ನಾವು ಬಜೆಟ್ ವಿರುದ್ಧವೇ ಹೋರಾಟ ಮಾಡಿದ್ದೆವು. ಆರು ತಿಂಗಳಲ್ಲಿ ಅರೇಳು ಕ್ಯಾಬಿನೆಟ್ ಸಭೆ ನಡೆದಿವೆ. ಅದರಲ್ಲಿ ಶೇ.70-80ರಷ್ಟು ಪಾಲು ಮೂರು ಜಿಲ್ಲೆಗಳಿಗೆ ಮಾತ್ರ ನೀಡಿದ್ದಾರೆಂದು ವಾಗ್ದಾಳಿ ನಡೆಸಿದರು.
Advertisement
Advertisement
ನೀರಾವರಿಯಲ್ಲಿಯೂ ಮೂರು ಜಿಲ್ಲೆಗಳಿಗೆ ಮಾತ್ರ ಒತ್ತು ನೀಡಿದ್ದಾರೆ. ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ಸಿಎಂ ಮರೆತು ಹೋಗಿದ್ದಾರೆ. ಉತ್ತರ ಕರ್ನಾಟಕಕ್ಕೆ ಸಿಎಂ ಕುಮಾರಸ್ವಾಂಮಿ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಜೆಡಿಎಸ್ ವರಿಷ್ಠರಾಗಿರುವ ದೇವೇಗೌಡರೂ ಇದುವರೆಗೂ ಒತ್ತು ನೀಡಿಲ್ಲವೆಂದು ಗಂಭೀರವಾಗಿ ಆರೋಪ ಮಾಡಿದರು.
Advertisement
ಇವರು ಮಹದಾಯಿ, ಕಳಸಾ ಯೋಜನೆಯ ವಿಚಾರದಲ್ಲೂ ಹಿಂದೇಟು ಹಾಕುತ್ತಿದ್ದಾರೆ. ಬೇಕಾದರೇ ಲೋಕೋಪಯೋಗಿ ಇಲಾಖೆಯ ದಾಖಲೆಗಳನ್ನು ಪರಿಶೀಲಿಸಿ. ಎಲ್ಲಾ ಯೋಜನೆಗಳು ಮೂರು ಜಿಲ್ಲೆಗಳಿಗೆ ನೀಡಿದ್ದಾರೆ. ಸಿಎಂ ಮೇಲೆ ಉತ್ತರ ಕರ್ನಾಟಕದ ಜನರಿಗೂ ಕೋಪವಿದೆ. ಉತ್ತರ ಕರ್ನಾಟಕಕ್ಕೆ ಸಿಎಂ ಅನ್ಯಾಯ ಮಾಡುತ್ತಿದ್ದಾರೆ. ಅಲ್ಲದೇ ಕೇವಲ ಮೂರು ಜಿಲ್ಲೆಗಳ ಅಭಿವೃದ್ಧಿಗೆ ಒತ್ತು ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ಸಾವಿರಾರು ಕೋಟಿ ರೂಪಾಯಿಯನ್ನು ಆ ಭಾಗಕ್ಕೆ ನೀಡಿದ್ದಾರೆ. ಬಹುತೇಕ ಎಲ್ಲಾ ಯೋಜನೆಗಳನ್ನು ಮೂರು ಜಿಲ್ಲೆಗಳಿಗೆ ಹಾಕಿಸಿಕೊಳ್ಳುತ್ತಿದ್ದಾರೆ. ಅವರಿಗೆ ರಾಜ್ಯದ ಬೇರೆ ಭಾಗಗಳು ಕಾಣುತ್ತಿಲ್ಲ. ಈ ಮೂಲಕ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಮೂರು ಜಿಲ್ಲೆಗಳು ಮಾತ್ರ ಸಿಎಂ ಕುಮಾರಸ್ವಾಮಿಗೆ ಬೇಕಾಗಿದೆ. ಈ ಬಗ್ಗೆ ಬಿಜೆಪಿ ಹೋರಾಟವನ್ನು ಮಾಡುತ್ತದೆ. ಅಲ್ಲದೇ ಡಿಸೆಂಬರ್ 10 ನಡೆಯುವ ಕಲಾಪದಲ್ಲಿಯೂ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತೇವೆಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv