ಶಾಸಕಾಂಗ ಸಭೆಗೆ ಗೈರಾದ ಶಾಸಕರಿಗೆ ಷೋಕಾಸ್ ನೋಟಿಸ್ – ನೋಟಿಸ್‍ನಲ್ಲೇನಿದೆ?

Public TV
3 Min Read
ramesh jarakiholi 3

ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಆಪರೇಷನ್ ಕಮಲ ಪ್ರಯತ್ನದಿಂದ ಕಾಂಗ್ರೆಸ್ ಪಕ್ಷ ಕರೆದಿದ್ದ ಶಾಸಕಾಂಗ ಸಭೆಗೆ ಗೈರಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಅವರಿಗೆ ಪಕ್ಷ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಷೋಕಾಸ್ ನೋಟಿಸ್ ನೀಡಿದ್ದಾರೆ.

ಸಿಎಲ್‍ಪಿ ಸಭೆಗೆ ಯಾವುದೇ ಪೂರ್ವ ಮಾಹಿತಿ ನೀಡದೆ ಗೈರಾಗಿರುವ ಕುರಿತು ಸೂಕ್ತ ಉತ್ತರ ನೀಡುವಂತೆ ನೋಟಿಸ್‍ನಲ್ಲಿ ಸೂಚನೆ ನೀಡಲಾಗಿದೆ. ಸಭೆಗೆ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ನಾಗೇಂದ್ರ, ಉಮೇಶ್ ಜಾದವ್ ಅವರು ಗೈರಾಗಿದ್ದರು. ಆದರೆ ಈ ಪೈಕಿ ನಾಗೇಂದ್ರ ಮತ್ತು ಜಾದವ್ ಪಕ್ಷದ ಅನುಮತಿ ಪಡೆದಿದ್ದರು ಎಂದು ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದರು. ಸದ್ಯ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಹಳ್ಳಿ ಅವರಿಗೆ ನೋಟಿಸ್ ನೀಡಲಾಗಿದೆ. ಆದರೆ ನೋಟಿಸ್‍ಗೆ ಉತ್ತರ ನೀಡಲು ಶಾಸಕರಿಗೆ ಯಾವುದೇ ಸಮಯವನ್ನು ನಿಗದಿ ಮಾಡಿಲ್ಲ.

siddramaiah

ನೋಟಿಸ್‍ನಲ್ಲೇನಿದೆ?:
ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ತೀವ್ರತರ ಸನ್ನಿವೇಶಗಳ ಹಿನ್ನೆಲೆಯಲ್ಲಿ ಜನವರಿ 18 ರಂದು ವಿಧಾನಸೌಧದ 3ನೇ ಮಹಡಿಯ ಕೊಠಡಿ ಸಂಖ್ಯೆ 334 ರಲ್ಲಿ ಕಾಂಗ್ರೆಸ್ ಪಕ್ಷದ ವಿಶೇಷ ಸಭೆಯನ್ನು ಕರೆಯಲಾಗಿತ್ತು. ಆ ಸಭೆಯಲ್ಲಿ ರಾಜ್ಯದಲ್ಲಿ ಉಂಟಾಗಿರುವ ತೀವ್ರವಾದ ಬರ ಪರಿಸ್ಥಿತಿ, ರಾಜಕೀಯ ವಿದ್ಯಮಾನಗಳು ಹಾಗು ಕಾಂಗ್ರೆಸ್ ಪಕ್ಷದ ಬಲವಧನೆ ಮತ್ತು ಸಮ್ಮಿಶ್ರ ಸರ್ಕಾರದ ಬಲವರ್ಧನೆ ಮಾಡಿ ರಾಜ್ಯವನ್ನು ಮತ್ತಷ್ಟು ಪ್ರಗತಿಯತ್ತ ಕೊಂಡ್ಯೊಯಲು ಚರ್ಚಿಸಿ, ನಿರ್ಣಯ ತೆಗೆದುಕೊಳ್ಳಲಾಯಿತು. ಈ ಮಹತ್ವದ ಸಭೆಯಲ್ಲಿ ತಾವು ತಪ್ಪದೇ ಹಾಜರಾಗಬೇಕೆಂದು ಜನವರಿ 16 ರಂದೇ ಪಕ್ಷದ ನಾಯಕನಾದ ನಾನು ನೋಟಿಸ್ ನೀಡಿದ್ದೇ. ಒಂದು ವೇಳೆ ತಾವು ಈ ಸಭೆಗೆ ಹಾಜರಾಗಿದ್ದಲ್ಲಿ ತಾವು ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಸ್ವಇಚ್ಛೆಯಿಂದ ಬಿಟ್ಟಿರುವಿರಿ ಎಂದು ಪರಿಗಣಿಸಿ ಭಾರತ ಸಂವಿಧಾನದ ಷೆಡ್ಯೂಲ್ 10ರ ಪ್ರಕಾರ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರೂ ಸಹ ತಾವು ಸದರಿ ಸಭೆಗೆ ಹಾಜರಾಗಿರಲಿಲ್ಲ. ತಮ್ಮ ಗೈರು ಹಾಜರಿಗೆ ಯಾವುದೇ ಸಕಾರಣವನ್ನು ನನಗಾಗಲೀ ಅಥವಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಛೇರಿಗಾಗಲೀ ತಿಳಿಸಿರುವುದಿಲ್ಲ. ತಮ್ಮ ಅನುಪಸ್ಥಿತಿಯನ್ನು ಗಮನಿಸಿದರೆ, ತಾವು ಸ್ವಇಚ್ಛೆಯಿಂದಲೇ ಸಭೆಗೆ ಗೈರು ಹಾಜರಾಗಿರುವುದು ಕಂಡು ಬಂದಿರುತ್ತದೆ.

WhatsApp Image 2019 01 19 at 18.54.00

ಇಷ್ಟೇ ಅಲ್ಲದೇ ಕಳೆದ ಹತ್ತಾರು ದಿನಗಳಿಂದ ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳಲ್ಲಿ ತಾವು ಕಾಂಗ್ರೆಸ್ ಶಾಸಕಾಂಗ ಪಕ್ಷವನ್ನು ತೊರೆದು ಬಿಜೆಪಿಗೆ ಸೇರುತ್ತಿರೆಂದು, ಆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಮತ್ತು ರಾಷ್ಟ್ರ ನಾಯಕರನ್ನು ಬೆಂಗಳೂರು, ದೆಹಲಿ, ಮುಂಬೈ ಮುಂತಾದ ಪ್ರದೇಶದಲ್ಲಿ ಭೇಟಿಯಾಗಿದ್ದೀರೆಂದು ಪದೇ ಪದೇ ಸುದ್ದಿ ಪ್ರಕಟವಾಗುತ್ತಿದ್ದರೂ ನೀವು ಅದನ್ನು ಎಲ್ಲಿಯೂ ನಿರಾಕರಿಸಿಲ್ಲ. ತಾವು ಕಾಂಗ್ರೆಸನ್ನು ತೊರೆಯುವ ನಡವಳಿಕೆಗಳನ್ನು ಪ್ರದರ್ಶಿಸಿದ್ದೀರಿ. ಈ ನಿಮ್ಮ ಪ್ರವೃತ್ತಿಯನ್ನು ನೋಡಿದರೆ ತಾವು ಸ್ವಇಚ್ಛೆಯಿಂದಲೇ ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ತ್ಯಜಿಸಿರುವಂತೆ ಕಾಣುತ್ತಿದೆ. ತಾವು ಕಾಂಗ್ರೆಸ್ ಪಕ್ಷದ ಚಿನ್ಹೆಯ ಮೇಲೆ ಶಾಸಕರಾಗಿ ಆಯ್ಕೆಯಾಗಿದ್ದು, ತಾವು ಯಾವುದೇ ಕಾರಣಕ್ಕೂ ಪಕ್ಷದ ಸದಸ್ಯತ್ವನ್ನು ತ್ಯಜಿಸಲು ಸಂವಿಧಾನದಲ್ಲಿ ಅವಕಾಶವಿರುವುದಿಲ್ಲ. ಆದರೂ ತಾವು ಯಾವುದೇ ಜನಾದೇಶವನ್ನು ಧಿಕ್ಕರಿಸಿ, ಸ್ವಲಾಭಕ್ಕಾಗಿ ಕಾಂಗ್ರೆಸ್ ಪಕ್ಷದ ಹಿತವನ್ನು ಕರೆಗಣಿಸಿ, ಮೇಲಿನ ರೀತಿಯಲ್ಲಿ ನಡೆದುಕೊಂಡಿರುತ್ತೀರಿ ಹಾಗೂ ಶಾಸಕಾಂಗ ಸಭೆಗೆ ಗೈರು ಹಾಜರಾಗಿರುತ್ತೀರಿ. ಈ ನಡವಳಿಕೆಗೆ ಭಾರತೀಯ ಸಂವಿಧಾನದ ಷೆಡ್ಯೂಲ್ 10ರ ಪ್ರಕಾರ ತಮ್ಮನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲು ಅವಕಾಶವಿರುತ್ತದೆ.

ಈ ಕಾರಣಗಳಿಂದ ನಿಮ್ಮನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲು ಏಕೆ ಕ್ರಮ ಜರುಗಿಸಬಾರದು ? ಎಂಬುವುದಕ್ಕೆ ಈ ಪತ್ರ ತಲುಪಿದ ಕೂಡಲೇ ಸೂಕ್ತ ಸಮಜಾಯಿಷಿಯನ್ನು ನೀಡತಕ್ಕದ್ದು. ತಪ್ಪಿದಲ್ಲಿ ನಿಮ್ಮ ಮೇಲೆ ಸಂವಿಧಾನದ ಷೆಡ್ಯೂಲ್ 10ರ ಪ್ರಕಾರ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

RAMESH

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *