ತುಮಕೂರು: ಕಾಂಗ್ರೆಸ್ ಪಕ್ಷ ಕಳ್ಳರ ಪಕ್ಷ ಇದ್ದ ಹಾಗೇ. ಒಳ್ಳೆ ಕೆಲಸ ಮಾಡುವವರ ವಿರುದ್ಧ ಕಾಂಗ್ರೆಸ್ ನಾಯಕರು ಯಾವಾಗಲೂ ಒಂದು ಕಣ್ಣಿಟ್ಟು ಬೆಳೆಯದಂತೆ ಮಾಡುತ್ತಾರೆ ಎಂದು ಮಧುಗಿರಿಯ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಆರೋಪವನ್ನು ಮಾಡಿದ್ದಾರೆ.
ಬುಧವಾರ ಮಧುಗಿರಿಯ ತಿಮ್ಲಾಪುರದಲ್ಲಿ ಆಯೋಜನೆ ಮಾಡಲಾಗಿದ್ದ ಹಾಲು ಒಕ್ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸ್ವಪಕ್ಷದ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಇಂದಿರಾಗಾಂಧಿ ಅವರ ಕಾಲದಲ್ಲಿ ಹಾಗಾಗುತ್ತಿರಲಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಕೆಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ತಮಗೆ ಸಂಪುಟದಲ್ಲಿ ಸ್ಥಾನಸಿಗದಂತೆ ಕೆಲವರು ಪಿತೂರಿಯನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
- Advertisement
ಮುಂಬರುವ ವಿಧಾನಸಭಾ ಚುನಾವಣೆ ಕುರಿತು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿರುವ ರಾಜಕೀಯ ನಾಯಕರ ಪೈಕಿ ಜನರ ಮತಗಳನ್ನು ಸೆಳೆಯುವ ಸಾಮರ್ಥ್ಯವನ್ನು ಹೊಂದಿರುವವರು ಮೂವರು ಮಾತ್ರ. ಬಿಜೆಪಿ ಪಕ್ಷದಿಂದ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್‍ನಿಂದ ಮಾಜಿ ಪ್ರಧಾನಿ ದೇವೆಗೌಡರು ಮತ್ತು ಕಾಂಗ್ರೆಸ್ ಪಕ್ಷದಿಂದ ಸಿಎಂ ಸಿದ್ದರಾಮಯ್ಯನವರು ಮಾತ್ರ ಎಂದು ಹೇಳಿದರು.