ಬೆಂಗಳೂರು: ಸರ್ಕಾರ ರಚನೆಯಾದ ಬಳಿಕ ಕಾಂಗ್ರೆಸ್ ಮುಖಂಡರ ವರ್ತನೆಗೆ ಸಿಎಂ ಕುಮಾರಸ್ವಾಮಿ ಬೇಸತ್ತಿದ್ದಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.
ಹೌದು. ಯಾವುದೇ ಷರತ್ತು ವಿಧಿಸದೇ ಬೆಂಬಲ ನೀಡಿದ್ದ ಕಾಂಗ್ರೆಸ್ ನಂತರ ಒಂದೊಂದೆ ಷರತ್ತು ವಿಧಿಸಲು ಮುಂದಾಗಿದೆ. ಸಚಿವ ಸಂಪುಟದಲ್ಲಿ ಮಂತ್ರಿಗಿರಿಗೆ ಪಟ್ಟು ಹಿಡಿದಿದ್ದ ಕೈ ನಾಯಕರು ಈಗ ಕುಮಾರಸ್ವಾಮಿಯವರಿಗೆ ವರ್ಗಾವಣೆ ವಿಚಾರದಲ್ಲಿ ಮತ್ತೊಂದು ಷರತ್ತು ವಿಧಿಸಿರುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.
ಬಹುಮತ ಸಾಬೀತಾದ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ಸರ್ಕಾರದ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಲು ಮುಂದಾಗಿದ್ದರು. ಆದರೆ ಖಾತೆ ಹಂಚಿಕೆಯಾಗೋವರೆಗೂ ಅಧಿಕಾರಿಗಳ ವರ್ಗಾವಣೆ ಬೇಡ ಎಂದು ಕಾಂಗ್ರೆಸ್ ಹೇಳಿದೆ ಎನ್ನಲಾಗಿದೆ.
ಈ ಕುರಿತು ಷರತ್ತು ವಿಧಿಸಿರುವ ಕಾಂಗ್ರೆಸ್ ಜೆಡಿಎಸ್ ಗೆ ನೀಡಿರುವ ಮಂತ್ರಿ ಸ್ಥಾನಗಳ ಇಲಾಖೆಗಳಲ್ಲಿ ಮಾತ್ರ ವರ್ಗಾವಣೆ ಮಾಡಿ ಎಂದು ತಿಳಿಸಿದ್ದು, ಕಾಂಗ್ರೆಸ್ ಸಚಿವ ಸ್ಥಾನಗಳ ಇಲಾಖೆಗಳ ವ್ಯಾಪ್ತಿಗೆ ಪ್ರವೇಶ ಮಾಡದಂತೆ ತಾಕೀತು ಮಾಡಿದೆ ಎನ್ನಲಾಗಿದೆ.
ಕಾಂಗ್ರೆಸ್ ಸಹ ಸದ್ಯ ಸಚಿವ ಸ್ಥಾನಗಳ ಹಂಚಿಕೆ ಕುರಿತ ಕಸರತ್ತು ನಡೆಸುತ್ತಿದ್ದು, ಹಲವು ಹಿರಿಯ ನಾಯಕರು ಹಾಗೂ ಶಾಸಕರು ಮಂತ್ರಿ ಸ್ಥಾನದ ಅಕಾಂಕ್ಷಿಗಳಾದ ಕಾರಣ ಪೈಪೋಟಿ ನಡೆಯುತ್ತಿದೆ. ಇದರಿಂದ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಅಧಿಕಾರಿಗಳ ವರ್ಗಾವಣೆಗೆ ಕೈ ಹಾಕಬೇಡಿ. ಕಾಂಗ್ರೆಸ್‍ನ ಸಚಿವ ಸ್ಥಾನಗಳ ವ್ಯಾಪ್ತಿಗೆ ನೀವು ಬರಬೇಡಿ ಎನ್ನುವ ಷರತ್ತು ವಿಧಿಸಿದೆ ಎನ್ನಲಾಗಿದೆ.