Lateral Entry | ಪರಿಕಲ್ಪನೆಯನ್ನು ಪರಿಚಯಿಸಿದ್ದೇ ಯುಪಿಎ – ಅಶ್ವಿನಿ ವೈಷ್ಣವ್‌ ತಿರುಗೇಟು

Public TV
3 Min Read
ASHWINI VAISHNAV

ನವದೆಹಲಿ: ಲ್ಯಾಟರಲ್ ಎಂಟ್ರಿ (Lateral Entry) ಮೂಲಕ ಸರ್ಕಾರಿ ನೌಕರರನ್ನು ನೇಮಕ ಮಾಡಿಕೊಳ್ಳುವ ಮೂಲಕ ಕೇಂದ್ರ ಸರ್ಕಾರ ದೇಶ ವಿರೋಧಿ ನಿರ್ಧಾರ ಕೈಗೊಂಡಿದೆ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ (Rahul Gandhi) ಹೇಳಿಕೆಯ ಬೆನ್ನಲ್ಲೇ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnav) ತಿರುಗೇಟು ನೀಡಿದ್ದಾರೆ.

ಲ್ಯಾಟರಲ್ ಎಂಟ್ರಿ ವಿಷಯದಲ್ಲಿ ಕಾಂಗ್ರೆಸ್‌ (Congress) ಬುಟಾಟಿಕೆ ಪ್ರದರ್ಶಿಸುತ್ತಿವುದು ಸ್ಪಷ್ಟವಾಗಿದೆ. ಲ್ಯಾಟರಲ್ ಎಂಟ್ರಿ ಪರಿಕಲ್ಪನೆಯನ್ನು ಪರಿಚಯಿಸಿದ್ದೇ ಯುಪಿಎ ಸರ್ಕಾರ ಎಂದು ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ ಅವರು, 2005 ರಲ್ಲಿ ಯುಪಿಎ ಸರ್ಕಾರ (UPA Government) ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ಎರಡನೇ ಆಡಳಿತ ಸುಧಾರಣಾ ಆಯೋಗವನ್ನು (ARC ) ಸ್ಥಾಪಿಸಲಾಗಿತ್ತು. ಆಡಳಿತ ಸುಧಾರಣಾ ಆಯೋಗ ಮಹತ್ವದ ಹುದ್ದೆಗಳಿಗೆ ಪರಿಣಿತಿ ಹೊಂದಿರುವ ತಜ್ಞರ ನೇಮಕಾತಿಯನ್ನು ಮಾಡುವಂತೆ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಜಾರಿಗೊಳಿಸಲು ಎನ್‌ಡಿಎ ಸರ್ಕಾರ ಪಾರದರ್ಶಕ ವಿಧಾನವನ್ನು ರಚಿಸಿದೆ. ಯುಪಿಎಸ್‌ಸಿ ಮೂಲಕ ಪಾರದರ್ಶಕವಾಗಿ ಮತ್ತು ನ್ಯಾಯಯುತವಾಗಿ ನೇಮಕಾತಿ ನಡೆಯಲಿದೆ. ಈ ಸುಧಾರಣೆಯು ಆಡಳಿತವನ್ನು ಸುಧಾರಿಸುತ್ತದೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: MUDA Scam | ಇಂದಿನಿಂದ ಕಾನೂನು ಸಮರ ಆರಂಭ – ಸಿಎಂ ಪರ ವಾದ ಏನು?

ಏನಿದು ವಿವಾದ?
ಲ್ಯಾಟರಲ್ ಎಂಟ್ರಿ ಮೂಲಕ ವಿವಿಧ ಸಚಿವಾಲಯಗಳು/ಇಲಾಖೆಗಳಲ್ಲಿಯ ಜಂಟಿ ಕಾರ್ಯದರ್ಶಿ, ಉಪಕಾರ್ಯದರ್ಶಿ ಮತ್ತು ನಿರ್ದೇಶಕರ 45 ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧವಾಗಿ ಯುಪಿಎಸ್‌ಸಿ ಶನಿವಾರ ಜಾಹೀರಾತು ಪ್ರಕಟಿಸಿತ್ತು. ಗ್ರೂಪ್‌ ಎ ವ್ಯಾಪ್ತಿಯಲ್ಲಿ ಬರುವ ಈ ಹುದ್ದೆಗಳಿಗೆ ಸಾಮಾನ್ಯವಾಗಿ ಭಾರತೀಯ ಆಡಳಿತ ಸೇವೆ(ಐಎಎಸ್), ಭಾರತೀಯ ಪೊಲೀಸ್ ಸೇವೆ(ಐಪಿಎಸ್), ಭಾರತೀಯ ಅರಣ್ಯ ಸೇವೆ(ಐಎಫ್‌ಒಎಸ್‌)ಯಂತಹ ಅಖಿಲ ಭಾರತ ಸೇವೆಗಳ ಅಧಿಕಾರಿಗಳಿಂದ ತುಂಬಲಾಗುತ್ತದೆ.

ಕೇಂದ್ರ ಸರ್ಕಾರ ಈಗ ಆರೋಗ್ಯ, ಹಣಕಾಸು, ಕೃಷಿ, ವಿಮಾನಯಾನ, ರೈತರ ಕಲ್ಯಾಣ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹುದ್ದೆಗಳಲ್ಲಿ ಈ ಕ್ಷೇತ್ರದಲ್ಲಿ ಜ್ಞಾನ ಇರುವ ತಜ್ಞರನ್ನೇ ನೇಮಕ ಮಾಡಲು ಮುಂದಾಗಿದೆ. ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿದ್ದಕ್ಕೆ ವಿಪಕ್ಷಗಳು ಕಿಡಿಕಾರಿವೆ.

ರಾಹುಲ್‌ ಹೇಳಿದ್ದೇನು?
ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಮೀಸಲಾತಿಯನ್ನು ಬಹಿರಂಗವಾಗಿ ಕಿತ್ತುಕೊಳ್ಳಲು ಸರ್ಕಾರ ಮುಂದಾಗಿದೆ. ಕೇಂದ್ರ ಲೋಕಸೇವಾ ಆಯೋಗದ ಬದಲಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಸಾರ್ವಜನಿಕ ಸೇವಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ.

ದೇಶದ ಎಲ್ಲ ಉನ್ನತ ಹುದ್ದೆಗಳಲ್ಲಿ ಅವಕಾಶ ವಂಚಿತರಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲ. ಇವರಿಗೆ ಹುದ್ದೆ ನೀಡದೇ ಲ್ಯಾಟರಲ್ ಎಂಟ್ರಿ ಮೂಲಕ ಅವರನ್ನು ಉನ್ನತ ಹುದ್ದೆಗಳಿಂದ ಮತ್ತಷ್ಟು ದೂರ ತಳ್ಳಲಾಗುತ್ತಿದೆ. ಸರ್ಕಾರಿ ಹುದ್ದೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article