ಬೆಂಗಳೂರು: ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಏನೇ ತೊಂದರೆಗಳಾದರೆ, ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿಸಿಎಂ ಜಿ.ಪರಮೇಶ್ವರ್ ಜೊತೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಿ ಎಂದು ಕಾಂಗ್ರೆಸ್ ಹೈಕಮಾಂಡ್ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಸಂದೇಶವನ್ನು ರವಾನಿಸಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಬಾಳಿಕೆಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಎದುರು ವಿಡಿಯೋ ಬಗ್ಗೆ ಸಮರ್ಥನೆ ನೀಡಬೇಕೆಂದು ಸೂಚಿಸಿತ್ತು. ಆದರೆ ಈಗ ಸಿದ್ದರಾಮಯ್ಯರಿಗೆ ಸಮರ್ಥನೆ ಕೇಳದೆಯೇ ಸಂದೇಶವನ್ನು ರವಾನಿಸಿದೆ.
Advertisement
ನೀವು ತಾಳ್ಮೆಯಿಂದ ಎಲ್ಲರನ್ನು ಮುನ್ನಡೆಸಿಕೊಂಡು ಹೋಗಬೇಕಿದೆ. ಎಲ್ಲ ನಾಯಕರನ್ನು ವಿಶ್ವಾಸದಿಂದ ಕರೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದೆ. ಸಮ್ಮಿಶ್ರ ಸರ್ಕಾರದಲ್ಲಿ ನೀವು ಮೈತ್ರಿ ಧರ್ಮವನ್ನು ಪಾಲಿಸಿಕೊಂಡು ಹೋಗಬೇಕು. ಮುಂದಿನ ದಿನಗಳಲ್ಲಿ ಸರ್ಕಾರದ ಆಡಳಿತ ವೈಖರಿಯ ಬಗ್ಗೆ ಅಸಮಾಧಾನಗಳಿದ್ದರೆ, ಬಹಿರಂಗವಾಗಿ ಯಾವುದೇ ಹೇಳಿಕೆಗಳನ್ನು ನೀಡಕೂಡದು. ಅಗತ್ಯಬಿದ್ದರೆ ಹೈಕಮಾಂಡ್ ಜೆಡಿಎಸ್ ನಾಯಕರೊಂದಿಗೆ ಚರ್ಚೆ ನಡೆಸುತ್ತದೆ ಎಂದು ಸಂದೇಶದಲ್ಲಿ ಹೇಳಲಾಗಿದೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭಿಸಿವೆ.
Advertisement