ಬೆಂಗಳೂರು: ವಿಧಾನ ಪರಿಷತ್‌ಗೆ (Vidhan Parishad) ಶಿಫಾರಸ್ಸಾಗಿದ್ದ 4 ಹೆಸರುಗಳಿಗೆ ಕಾಂಗ್ರೆಸ್ ಹೈಕಮಾಂಡ್ (High Command) ಕೊನೆ ಕ್ಷಣದಲ್ಲಿ ತಾತ್ಕಾಲಿಕ ತಡೆಯನ್ನು ವಿಧಿಸಿದೆ.
ರಾಜ್ಯ ವಿಧಾನ ಪರಿಷತ್‌ನ ನಾಲ್ಕು ಖಾಲಿ ಸ್ಥಾನಗಳಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಹಾಗೂ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು, ದಲಿತ ಮುಖಂಡ ಡಿ.ಜಿ. ಸಾಗರ್ ಹಾಗೂ ರಾಜ್ಯ ಸರಕಾರದ ಅನಿವಾಸಿ ಭಾರತೀಯ ಕೋಶದ (NRI) ಉಪಾಧ್ಯಕ್ಷೆ ಆರತಿ ಕೃಷ್ಣ ಅವರನ್ನು ನಾಮನಿರ್ದೇಶನ ಮಾಡಲು ಹೈಕಮಾಂಡ್ ಶಿಫಾರಸು ಮಾಡಿತ್ತು.
ಹೈಕಮಾಂಡ್ ಶಿಫಾರಸ್ಸಿನ ಮೇರೆಗೆ ರಾಜ್ಯಪಾಲರಿಗೆ ಕಳುಹಿಸಲು ನಾಲ್ವರ ಹೆಸರಿದ್ದ ಶಿಫಾರಸ್ಸು ಪತ್ರಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಸಹಿ ಹಾಕಿದ್ದರು.
ಈಗ ಹೈಕಮಾಂಡ್ ದಿಢೀರ್ ಮಧ್ಯಪ್ರವೇಶಿಸಿ ರಾಜ್ಯಪಾಲರಿಗೆ ಕಳುಹಿಸದಂತೆ ಸಿಎಂ ಸಿದ್ದರಾಮಯ್ಯನವರಿಗೆ ಸೂಚಿಸಿದೆ. ರಾಜ್ಯದ ಕಾಂಗ್ರೆಸ್ ನಾಯಕರ ತೀವ್ರ ಒತ್ತಡದ ಹಿನ್ನಲೆಯಲ್ಲಿ ಕಡೆಗಳಿಗೆಯಲ್ಲಿ ಎಐಸಿಸಿಯೇ ತಡೆ ಹಿಡಿಯುವಂತೆ ಸೂಚಿಸಿದೆ.
ನಾನಾ ಕ್ಷೇತ್ರಗಳ ಸಾಧಕರ ಕೋಟಾದಲ್ಲಿ ನಾಮನಿರ್ದೇಶನಕ್ಕೆ ಹಲವು ಮಂದಿ ಆಕಾಂಕ್ಷಿಗಳಿದ್ದರು. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮೂಲಕ ಸಂಭಾವ್ಯರ ಪಟ್ಟಿ ಪಡೆದುಕೊಂಡಿದ್ದ ಎಐಸಿಸಿ ವರಿಷ್ಠ ನಾಯಕರು ಈ ನಾಲ್ವರನ್ನು ಅಂತಿಮಗೊಳಿಸಿತ್ತು. ಈ ನಾಲ್ವರಲ್ಲಿ ರಮೇಶ್ ಬಾಬು ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದರು.
ಪರಿಷತ್ ನಾಮನಿರ್ದೇಶನಕ್ಕೆ ಅವಕಾಶ ಪಡೆದವರಲ್ಲಿ ರಮೇಶ್ ಬಾಬು ಮತ್ತು ದಿನೇಶ್ ಅಮೀನ್‌ಮಟ್ಟು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರೆ ಡಿ.ಜಿ. ಸಾಗರ್ ಪರಿಶಿಷ್ಟ ಜಾತಿಗೆ ಸೇರಿದ್ದರೆ, ಆರತಿ ಕೃಷ್ಣ ಒಕ್ಕಲಿಗ ಸಮಾಜದವರಾಗಿದ್ದಾರೆ.