ಬೆಂಗಳೂರು: ಮೈತ್ರಿ ಸರಕಾರದ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಕಸರತ್ತು ಮುಂದುವರೆದಿದೆ. ಆದರೆ ಈ ಸಚಿವ ಸ್ಥಾನಗಳ ಆಕಾಂಕ್ಷಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್ ಕೊಟ್ಟಿದೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಕೊನೆಯಾಗದೆ ಕಗ್ಗಂಟಾಗಿದೆ. ಈಗ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಹೊಸ ಷರತ್ತು ಮತ್ತು ಮಾನದಂಡ ಸಿದ್ಧಪಡಿಸಿದೆ. ಜಾತಿ ಮತ್ತು ಪ್ರದೇಶವಾರು ಆಧರಿಸಿ ಸಚಿವ ಸ್ಥಾನವನ್ನು ನೀಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.
Advertisement
ಸಚಿವ ಸ್ಥಾನ ಮತ್ತು ಖಾತೆ ಹಂಚಿಕೆ ವಿಚಾರವಾಗಿ ಶನಿವಾರ ಸಂಜೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯೊಂದಿಗೆ ರಾಜ್ಯ ಕಾಂಗ್ರೆಸ್ ನಾಯಕರು ಸಭೆ ನಡೆಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ರಾಜ್ಯ ಚುನಾವಣಾ ಉಸ್ತುವಾರಿ ಕೆ.ವೇಣುಗೋಪಾಲ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಸಭೆಯಲ್ಲಿ ಭಾಗವಹಿಸಿದ್ದರು.
Advertisement
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಇಂದಿನಿಂದ ಮೂರು ದಿನಗಳ ಕಾಲ ವಿದೇಶ ಪ್ರವಾಸಕ್ಕೆ ತೆರಳುತ್ತಿರುವ ಹಿನ್ನೆಲೆ ಸಂಪುಟ ಸರ್ಕಸ್ ಇನ್ನು ಮೂರು ದಿನ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂಬುದಾಗಿ ತಿಳಿದುಬಂದಿದೆ.
Advertisement