ನವದೆಹಲಿ: ಸಂಸತ್ ಸಾಕ್ಷಿಯಾಗಿ ಕಾಂಗ್ರೆಸ್ ವೈಫಲ್ಯಗಳನ್ನು ಪ್ರಧಾನಿ ಮೋದಿ ಮತ್ತೊಮ್ಮೆ ಬಯಲು ಮಾಡಿದ್ದಾರೆ. ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಭಾಷಣದ ಮಾಡುವ ವೇಳೆ ಪ್ರಧಾನಿ ಮೋದಿ ಪ್ರತಿ ಮಾತಿನಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಚುಚ್ಚಿ ಚುಚ್ಚಿ ತರಾಟೆಗೆ ತಗೊಂಡಿದ್ದಾರೆ.
ದೇಶವನ್ನು ಐವತ್ತು ವರ್ಷದ ಆಳಿದ ಕಾಂಗ್ರೆಸ್ ಪಕ್ಷ ತಮ್ಮ ಅಹಂಕಾರದ ನೀತಿ ಕಾರಣದಿಂದಲೇ ಈಗ ದುಸ್ಥಿತಿಯ ಅಂಚು ತಲುಪಿದೆ. ನೀವು ಜನರ ನಡುವೆ ಇದ್ದಿದ್ದರೇ ನಿಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಕಾಂಗ್ರೆಸ್ಸಿಗರ ಈಗಿನ ಅಹಂಕಾರದ ವರ್ತನೆ ನೋಡಿದ್ರೆ ಇನ್ನೂ 100 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಕಾಣುತ್ತಿಲ್ಲ ಎಂದು ಮೋದಿ ಲೇವಡಿ ಮಾಡಿದರು.
Advertisement
ಕಾಂಗ್ರೆಸ್ ಪಕ್ಷ ಹೇಗೆ ಹಂತ ಹಂತವಾಗಿ ವಿವಿಧ ರಾಜ್ಯಗಳಿಂದ ಹೇಗೆ ಮಾಯವಾಗುತ್ತಿದೆ ಎಂಬುದನ್ನು ವಿವರಿಸಿದ ಮೋದಿ ಕೋವಿಡ್, ಮೇಕ್ ಇಂಡಿಯಾ, ಆರ್ಥಿಕತೆ, ಹಣದುಬ್ಬರ, ಉದ್ಯಮ ನೀತಿ, ವಿದೇಶಾಂಗ ನೀತಿಗಳ ವಿಚಾರದಲ್ಲಿ ಕಾಂಗ್ರೆಸ್ ನಿಲುವುಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಪಕ್ಷದ ನಾಯಕರನ್ನು ಹಿಗ್ಗಾಮುಗ್ಗಾ ಜಾಡಿಸಿದರು.
Advertisement
Advertisement
ಪ್ರಧಾನಿ ಮೋದಿಯ ಪ್ರತಿ ಮಾತಿಗೂ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಇದಕ್ಕೆಲ್ಲಾ ಮೋದಿಯೊಬ್ಬರೇ ತೀಕ್ಷ್ಣ ಮಾತುಗಳಲ್ಲಿಯೇ ತಿರುಗೇಟು ನೀಡಿದರು. ಸದನ ದೇಶದ ಅಭಿವೃದ್ಧಿ ಚರ್ಚೆಗೆ ಮೀಸಲಿರಬೇಕು. ಆದ್ರೆ ನೀವು ಮಾಡುತ್ತಿರುವ ರಾಜಕೀಯಕ್ಕೆ ನಾನು ಉತ್ತರ ನೀಡಲೇಬೇಕಿದೆ. ಅದಕ್ಕೆ ನೀಡುತ್ತಿದ್ದೇನೆ ಅಂತಾ ತಮ್ಮ ಮಾತುಗಳನ್ನು ಸಮರ್ಥನೆ ಮಾಡಿಕೊಂಡರು. ಮೋದಿಗೆ ತಿರುಗೇಟು ನೀಡಬೇಕಿದ್ದ ರಾಹುಲ್ ಗಾಂಧಿ ಸದನಕ್ಕೆ ಗೈರಾಗಿದ್ದರು. ಇದನ್ನೂ ಓದಿ: ಕೋವಿಡ್ ಲಸಿಕೆ ಪಡೆಯಲು ಆಧಾರ್ ಕಡ್ಡಾಯವಲ್ಲ
Advertisement
ಮೋದಿ ಪ್ರಮುಖ ಹೇಳಿಕೆಗಳು
ಕಾಂಗ್ರೆಸ್ ತಮಿಳು ಭಾವನೆಗಳಿಗೆ ಧಕ್ಕೆ ತರಲು ಪ್ರಯತ್ನಿಸಿ ದೇಶವನ್ನು ಒಡೆದು ಆಳಲು ಬಯಸುತ್ತದೆ. ಒಡೆದು ಆಳುವುದು ಅವರ ಡಿಎನ್‌ಎಯಲ್ಲಿದೆ. ಆದರೆ ಜನರಲ್ ಬಿಪಿನ್ ರಾವತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬೀದಿ ಬೀದಿಗಳಲ್ಲಿ ಸಾಲುಗಟ್ಟಿನಿಂತ ತಮಿಳುನಾಡು ನಾಗರಿಕರಿಗೆ ನಾನು ಸೆಲ್ಯೂಟ್ ಹೊಡೆಯುತ್ತೇನೆ. ಒಡೆದು ಆಳುವ ನೀತಿಯನ್ನು ಮಾಡುತ್ತಿರುವ ಕಾಂಗ್ರೆಸ್ ‘ತುಕ್ಡೆ ತುಕ್ಡೆ ಗ್ಯಾಂಗ್’ನ (ದೇಶ ವಿಭಜಿಸುವವರ) ನಾಯಕ.
ಗರೀಬಿ ಹಟಾವೋ (ಬಡತನ ನಿರ್ಮೂಲನೆ) ಘೋಷಣೆ ಮಾಡುವ ಮೂಲಕ ಕಾಂಗ್ರೆಸ್ ಹಲವಾರು ಚುನಾವಣೆಗಳನ್ನು ಗೆದ್ದಿದೆ. ಆದರೆ ಬಡತನ ಕೊನೆಗೊಂಡಿಲ್ಲ. ಹೀಗಾಗಿ ಜನರು ಕಾಂಗ್ರೆಸ್ ಅನ್ನು ಹೊರಹಾಕಿದ್ದಾರೆ.
ನಾಗಾಲ್ಯಾಂಡ್ 24 ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತ್ತು. 27 ವರ್ಷಗಳ ಹಿಂದೆ ಒಡಿಶಾ ನಿಮ್ಮನ್ನೇ ಬೆಂಬಲಿಸಿದೆ. 28 ವರ್ಷಗಳ ಹಿಂದೆ ಗೋವಾದಲ್ಲಿ ಪೂರ್ಣ ಬಹುಮತದೊಂದಿಗೆ ಗೆದ್ದಿದ್ದೀರಿ. 1988ರಲ್ಲಿ ತ್ರಿಪುರಾದಲ್ಲಿ ಕಾಂಗ್ರೆಸ್ ಗೆದ್ದಿತ್ತು. ಪಶ್ಚಿಮ ಬಂಗಾಳ 1972ರಲ್ಲಿ ನಿಮ್ಮನ್ನು ಬೆಂಬಲಿಸಿದೆ. ತೆಲಂಗಾಣ ರಾಜ್ಯ ರಚನೆಯ ಶ್ರೇಯವನ್ನು ನೀವೇ ಪಡೆದಿದ್ದೀರಿ. ಆದರೆ ಜನ ಮಾತ್ರ ನಿಮ್ಮನ್ನು ಸ್ವೀಕರಿಸಲಿಲ್ಲ.
ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಆರ್ಥಿಕತೆಯ ಬಗ್ಗೆ ಕಾಂಗ್ರೆಸ್ಸಿನ ಪಿ ಚಿದಂಬರಂ ಬರೆಯುತ್ತಿದ್ದಾರೆ. ಆದರೆ 2012ರಲ್ಲಿ ಸಾರ್ವಜನಿಕರು ನೀರಿನ ಬಾಟಲಿಗೆ 15 ರೂಪಾಯಿ ಮತ್ತು ಐಸ್ ಕ್ರೀಮ್‌ಗೆ 20 ರೂಪಾಯಿಗಳನ್ನು ಖರ್ಚು ಮಾಡುವಾಗ ತೊಂದರೆಯಾಗುವುದಿಲ್ಲ. ಆದರೆ ಗೋಧಿ ಮತ್ತು ಅಕ್ಕಿಯ ಬೆಲೆಯಲ್ಲಿ 1 ರೂಪಾಯಿ ಏರಿಕೆಯಾದಾಗ ಸಾರ್ವಜನಿಕರು ಸಹಿಸುವುದಿಲ್ಲ ಎಂದು ಹೇಳಿದ್ದರು.
ಪ್ರತಿಪಕ್ಷಗಳು ಇಲ್ಲಿ ಹಣದುಬ್ಬರದ ವಿಷಯವನ್ನು ಎತ್ತಿದ್ದಾರೆ. ಆದರೆ ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಎಷ್ಟಿತ್ತು ಎಂಬುದನ್ನು ಪ್ರಸ್ತಾಪಿಸಿದರೆ ಉತ್ತಮ. ಸಾಂಕ್ರಾಮಿಕ ಸಂದರ್ಭದಲ್ಲಿಯೂ ನಮ್ಮ ಸರ್ಕಾರವು ಹಣದುಬ್ಬರವನ್ನು ನಿಭಾಯಿಸಲು ಪ್ರಯತ್ನಿಸಿದೆ. 2014-2020ರ ಅವಧಿಯಲ್ಲಿ ಹಣದುಬ್ಬರ ದರ ಶೇ.5ಕ್ಕಿಂತ ಕಡಿಮೆ ಇತ್ತು. ಕಾಂಗ್ರೆಸ್ ಇಂದು ಅಧಿಕಾರದಲ್ಲಿದ್ದರೆ, ಹಣದುಬ್ಬರ ಏರಿಕೆಗೆ ಕೋವಿಡ್ ಅನ್ನು ದೂಷಿಸಿ ಮುಂದೆ ಸಾಗುತ್ತಿತ್ತು.
ಕೋವಿಡ್ ಮೊದಲ ಅಲೆಯ ಸಮಯದಲ್ಲಿ ನೀವು (ಕಾಂಗ್ರೆಸ್) ವಲಸೆ ಕಾರ್ಮಿಕರಿಗೆ ಮುಂಬೈಯಿಂದ ಊರುಗಳಿಗೆ ಹೋಗಲು ಉಚಿತ ರೈಲು ಟಿಕೆಟ್ ನೀಡಿದ್ದೀರಿ. ಈ ಸಮಯದಲ್ಲಿ, ದೆಹಲಿ ಸರ್ಕಾರವು ವಲಸೆ ಕಾರ್ಮಿಕರನನ್ನು ನಗರ ತೊರೆಯುವಂತೆ ಹೇಳಿತು. ಅಲ್ಲದೇ, ಅವರಿಗೆ ಬಸ್ಸುಗಳನ್ನು ಒದಗಿಸಿತು. ಪರಿಣಾಮವಾಗಿ, ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಕೋವಿಡ್ ವೇಗವಾಗಿ ಹರಡಿತು.
ಕೆಲವರಿಗೆ ‘ಮೇಕ್ ಇನ್ ಇಂಡಿಯಾ’ದ ಬಗ್ಗೆ ಸಮಸ್ಯೆ ಇದೆ. ಯಾಕೆಂದರೆ ಇದರಲ್ಲಿ ಭ್ರಷ್ಟಚಾರ ಮಾಡಲು ಆಗುವುದಿಲ್ಲ. ಹಣವನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ನಾವು ರಕ್ಷಣಾ ಇಲಾಖೆಯ ಎಲ್ಲಾ ಬಾಕಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದ್ದೇವೆ.
ಪ್ರತಿಪಕ್ಷಗಳು ‘ಮೋದಿ’ ಎಂದು ಹೆಸರನ್ನು ಜಪಿಸದೇ ಒಂದು ಕ್ಷಣವೂ ಬದುಕುವುದಿಲ್ಲ. ಅದಕ್ಕಾಗಿಯೇ ಬೆಳಗ್ಗೆಯಿಂದಲೇ ಮೋದಿಯನ್ನು ಗುರಿಯಾಗಿಸಿ ಟೀಕೆ ಮಾಡುತ್ತಿರುತ್ತವೆ.