ಬೆಂಗಳೂರು: ರಾಜ್ಯದಲ್ಲಿ ಜನರು ಕಳೆದ 5 ತಿಂಗಳುಗಳಿಂದ ಬರಗಾಲದ ನೋವನ್ನು ಅನುಭವಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R.Ashok) ತಿಳಿಸಿದರು.
ಮಲ್ಲೇಶ್ವರದ ಬಾವುರಾವ್ ದೇಶಪಾಂಡೆ ಭವನದಲ್ಲಿ ಇಂದು (ಶನಿವಾರ) ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬರಗಾಲಪೀಡಿತ ಎಂದು ಘೋಷಿಸುವ ಮೊದಲು ಅಳೆದು ತೂಗಿ 3 ತಿಂಗಳು ಮುಂದೆ ಹಾಕಿದ್ದರು. ರಾಜ್ಯ ಸರ್ಕಾರದಲ್ಲಿ ಹಣ ಇಲ್ಲದ ಕಾರಣ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದರು ಎಂದು ಆಕ್ಷೇಪಿಸಿದರು. ಜನರು ಗುಳೆ ಹೋಗುತ್ತಿದ್ದಾರೆ ಎಂದರೆ ಸರ್ಕಾರ ಒಪ್ಪುತ್ತಿಲ್ಲ. ಹಾಗಿದ್ದರೆ ಮನೆಗಳಿಗೆ ಯಾಕೆ ಬೀಗ ಹಾಕಿದ್ದಾರೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮಾರ್ಚ್ 13ರ ಒಳಗಡೆ 100 ಹೆದ್ದಾರಿ ಯೋಜನೆ, 10 ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ ಮೋದಿ
Advertisement
Advertisement
ಹಳ್ಳಿಗಳಲ್ಲಿ ಕೇವಲ ವಯಸ್ಸಾದವರು ಇದ್ದಾರೆ. ಯುವಕರು, ಮಧ್ಯ ವಯಸ್ಕರು ಹಳ್ಳಿಗಳಲ್ಲಿ ಇಲ್ಲ. ಹಾಗಿದ್ದರೆ ಅವರು ಎಲ್ಲಿದ್ದಾರೆ? ಗೋವಾ, ಮಂಗಳೂರು, ಹೈದರಾಬಾದ್ ಕಡೆ ಜನರು ಗುಳೆ ಹೋಗುತ್ತಿದ್ದಾರೆ ಎಂದು ವಿವರಿಸಿದರು.
Advertisement
ಸರ್ಕಾರವು ಕುಂಭಕರ್ಣ ನಿದ್ರೆಯಲ್ಲಿದೆ. ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿದೆ. ಎಲ್ಲವನ್ನೂ ಮುಚ್ಚಿಡುತ್ತಿದೆ. ಬಾಗಿಲು ಹಾಕಿದರೂ ಮುಚ್ಚಿಡುವುದು, ಪಾಕಿಸ್ತಾನ ಜಿಂದಾಬಾದ್ (Pro-Pak Slogan) ಎಂದರೂ ಮುಚ್ಚಿಡುತ್ತದೆ. ಬರಗಾಲ ಇಲ್ಲ ಎಂಬಂತೆ ಮುಚ್ಚಿಡುವ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಅಂತರರಾಷ್ಟ್ರೀಯ ಚಾನೆಲ್‍ನಲ್ಲಿ ಇದು ಸುದ್ದಿಯಾಗಿದೆ. ಹೀಗಿದ್ದರೂ ಐ.ಟಿ, ಬಿ.ಟಿಯವರು ಬೆಂಗಳೂರಿಗೆ ಹೋಗಲು ಇಷ್ಟ ಪಡುತ್ತೀರಾ ಎಂದು ಆಂಕರ್ ಕೇಳಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಕಿವಿಯಾರೆ ಕೇಳಿದ್ದೇನೆ. ಬೆಂಗಳೂರಿನ ಮಾನ-ಮರ್ಯಾದೆಯನ್ನು ಈ ಕಾಂಗ್ರೆಸ್ (Congress) ಸರ್ಕಾರ ಹರಾಜು ಹಾಕಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಡಿಎಂಕೆ ಜೊತೆ ಕೈ ಜೋಡಿಸಿದ ನಟ ಕಮಲ್ ಹಾಸನ್
Advertisement
ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಐಟಿ ಸಿಟಿ, ಬಿ.ಟಿ. ಸಿಟಿ ಎಂಬ ಹೆಸರಿದೆ. ಬಿಸಿನೆಸ್ ವಿಷಯದಲ್ಲಿ ಬೆಂಗಳೂರಿಗೆ ಆದ್ಯತೆ ಕೊಡಲಾಗುತ್ತಿತ್ತು ಎಂದ ಅವರು, ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಂತೆ ನಾವು ಆಗ್ರಹಿಸಿದ್ದೆವು. ಆದರೆ, ‘ಇಂಡಿ’ ಒಕ್ಕೂಟದ ಭಾಗಿದಾರ ಪಕ್ಷವೆಂಬ ಕಾರಣಕ್ಕೆ ಸ್ಟಾಲಿನ್ ಅವರ ಕೋರಿಕೆ ಮೇರೆಗೆ ನೀರನ್ನು ಬಿಟ್ಟಿದ್ದಾರೆ. ಈಗ ಶೇ.60 ಬೋರ್‍ವೆಲ್‍ಗಳು ಬತ್ತಿ ಹೋಗಿವೆ. ಕುಡಿಯುವ ನೀರಿಗೂ ಹಾಹಾಕಾರ ಇದೆ ಎಂದು ವಿವರಿಸಿದರು.
ಕಾವೇರಿ ನೀರನ್ನೂ ಶೇ.20ರಿಂದ ಶೇ.30ರಷ್ಟು ಕಡಿಮೆ ಮಾಡಿದ್ದಾರೆ. ಆದರೆ, ಇದರ ಕುರಿತು ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ. ಮುಂದೆ ಮಳೆ ಬರದೆ ಇದ್ದರೆ ಸಮಸ್ಯೆ ತೀವ್ರಗೊಳ್ಳಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ ಉಪಸ್ಥಿತರಿದ್ದರು. ಇದನ್ನೂ ಓದಿ: ಹಾಲಿ ಸಂಸದರಿಗೆ ಟಿಕೆಟ್ ಇಲ್ಲವೆಂದು ಮೋದಿ, ಅಮಿತ್ ಶಾ ಹೇಳಿಲ್ಲ: ಶೋಭಾ ಕರಂದ್ಲಾಜೆ