-ನೀರಿಗಾಗಿ ಹೋರಾಡುವಂತೆ ವಿದ್ಯೆಗಾಗಿ ಹೋರಾಟ ಎಂದ ವಿಪಕ್ಷ ನಾಯಕ
ಬೆಂಗಳೂರು: ವಿಶ್ವವಿದ್ಯಾಲಯಗಳಿಂದ ಲಾಭ ಬರುತ್ತಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ಮುಚ್ಚಲಾಗಿದೆ ಎಂದಿರುವ ಕಾಂಗ್ರೆಸ್ ಸರ್ಕಾರ ಭಿಕ್ಷೆ ಬೇಡುವ ಸ್ಥಿತಿಗೆ ಬಂದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ (Mandya) ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಶಿಕ್ಷಣದಲ್ಲಿ ಹಿಂದುಳಿದಿದೆ. ಇದಕ್ಕಾಗಿ ಬಿಜೆಪಿ ಸರ್ಕಾರ ಹೊಸ 9 ವಿಶ್ವವಿದ್ಯಾಲಯಗಳನ್ನು ನೀಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಕಿತ್ತುಕೊಂಡಿದೆ. ವಿವಿಗಳನ್ನು ಮುಚ್ಚಲು ರೂಪಿಸಿದ ವರದಿಯಲ್ಲಿ ವಿವಿಗಳು ಲಾಭದಾಯಕವಾಗಿಲ್ಲ ಎಂದು ಉಲ್ಲೇಖಿಸಲಾಗಿದೆ. ಶಿಕ್ಷಣ ಸಂಸ್ಥೆಗಳಿಂದಲೂ ಆದಾಯ ಬರಬೇಕು ಎಂಬುದು ಸರ್ಕಾರದ ಉದ್ದೇಶ ಏಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭಿಕ್ಷೆ ಬೇಡುತ್ತಿದ್ದಾರೆ. ಈ ಬಾರಿ 1 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ಹಿಂದಿನ ಎಲ್ಲ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಸಿದ್ದರಾಮಯ್ಯ ಅವರೇ ಅತ್ಯಧಿಕ ಸಾಲ ಮಾಡಿದ್ದಾರೆ ಎಂದು ದೂರಿದರು.ಇದನ್ನೂ ಓದಿ: ಅಮಲಾ ಪೌಲ್ ಪ್ಯಾಂಟ್‌ಲೆಸ್ ಫೋಟೋಶೂಟ್ ನೋಡಿ ಕಾಲೆಳೆದ ನೆಟ್ಟಿಗರು
ಜಿಲ್ಲೆಗೆ ಒಂದು ವಿಶ್ವವಿದ್ಯಾಲಯವಿದ್ದರೆ ಆ ಜಿಲ್ಲೆ ಶಿಕ್ಷಣದಲ್ಲಿ ಸ್ವಾವಲಂಬಿಯಾಗುತ್ತದೆ:
ಶಿಕ್ಷಣ ಎಂದರೆ ವ್ಯಾಪಾರವಲ್ಲ, ಅದು ನಮ್ಮ ದೇಶದ ಆಸ್ತಿ. ಮುಚ್ಚಿರುವ ಬಾರ್‌ಗಳನ್ನು ತೆರೆದು, ವಿವಿಗಳನ್ನು ಮುಚ್ಚಲಾಗುತ್ತಿದೆ. ಎಲ್ಲ ವಿವಿಗಳನ್ನು ನಡೆಸಲು 252 ಕೋಟಿ ರೂ. ಇದ್ದರೆ ಸಾಕು. ಉಚಿತವಾಗಿ 2 ಸಾವಿರ ರೂ. ನೀಡಿ ವಿವಿಗಳನ್ನು ಮುಚ್ಚುತ್ತೇವೆ ಎಂದರೆ ಗ್ಯಾರಂಟಿಗೆ ಬೆಲೆ ಇರುವುದಿಲ್ಲ. ಬಿಜೆಪಿ ಸರ್ಕಾರ ವಿಶ್ವವಿದ್ಯಾಲಯಗಳನ್ನು ರೂಪಿಸಿದಾಗ ಹೊಸ ಹುದ್ದೆಗಳನ್ನು ಸೃಷ್ಟಿ ಮಾಡಿರಲಿಲ್ಲ. ಇರುವ ಸಿಬ್ಬಂದಿಯನ್ನೇ ನೇಮಕ ಮಾಡಲಾಗಿತ್ತು. ವಿಶ್ವವಿದ್ಯಾಲಯ ಮುಚ್ಚುವುದರಿಂದ ಲಾಭವಾಗುತ್ತದೆಯೋ? ನಷ್ಟವಾಗುತ್ತದೆಯೋ? ಎಂಬುದು ಬೇಕಿಲ್ಲ. ಇದರಿಂದ ಮಕ್ಕಳಿಗೆ ಏನು ತೊಂದರೆಯಾಗುತ್ತದೆ? ಎಂಬ ಬಗ್ಗೆ ಸರ್ಕಾರ ಸ್ಪಷ್ಟಪಡಿಸಲಿ. ನೀರಿಗಾಗಿ ಹೋರಾಟ ಮಾಡುವಂತೆಯೇ, ವಿದ್ಯೆಗಾಗಿ ಮಂಡ್ಯದ ಜನರು ಹೋರಾಟ ಮಾಡಲಿದ್ದಾರೆ. ಸರ್ಕಾರದ ಬಳಿ ಹಣವಿಲ್ಲವೆಂದರೆ ಅದನ್ನು ನೇರವಾಗಿ ಹೇಳಲಿ. ನಾವೆಲ್ಲರೂ ಹಣ ಸಂಗ್ರಹಿಸಿ ವಿಶ್ವವಿದ್ಯಾಲಯ ನಡೆಸುತ್ತೇವೆ ಎಂದರು.
ಆರ್ಥಿಕ ಪರಿಸ್ಥಿತಿ ನೆಪವೊಡ್ಡಿ ಮಂಡ್ಯ ವಿವಿ ಸೇರಿದಂತೆ ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ @INCKarnataka ಸರ್ಕಾರದ ನಡೆಯನ್ನು ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಜೊತೆಯಾಗಿ ಮಂಡ್ಯ ಜಿಲ್ಲೆಯ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಲ್ಲೇಶ್ವರಂ ಶಾಸಕರಾದ ಶ್ರೀ @drashwathcn, ವಿಧಾನ… pic.twitter.com/7TpB9L7d7J
— R. Ashoka (@RAshokaBJP) March 1, 2025
ಪಾಪರ್ ಸರ್ಕಾರ
ಗ್ಯಾರಂಟಿಗಳಿಂದಾಗಿ ಪಾಪರ್ ಆಗಿರುವ ಸರ್ಕಾರ, ವಿವಿಗಳನ್ನು ಮುಚ್ಚಿದೆ. ಮಂಡ್ಯ, ಚಾಮರಾಜನಗರ ಮೊದಲಾದ ಜಿಲ್ಲೆಗಳು ಶಿಕ್ಷಣದಲ್ಲಿ ಮೇಲಕ್ಕೆ ಬರಬೇಕೆಂದು ವಿವಿಗಳನ್ನು ಆರಂಭಿಸಲಾಗಿತ್ತು. ಈಗ ವಿವಿಗಳನ್ನು ಮುಚ್ಚಿ ಅದೇ ಸ್ಥಳದಲ್ಲಿ ಬಾರ್‌ಗಳನ್ನು ಆರಂಭಿಸಬಹುದು. ಸರ್ಕಾರದ ಉದ್ದೇಶ ವಿದ್ಯೆ ನೀಡುವುದೋ ಅಥವಾ ಮದ್ಯ ಹಂಚುವುದೋ ಎಂದು ತಿಳಿಸಬೇಕು ಎಂದು ಹೇಳಿದರು.
ಸರ್ಕಾರ ಪಾಪರ್ ಆಗಿರುವುದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಡ. ವಿಶ್ವವಿದ್ಯಾಲಯ ಆರಂಭಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅನುದಾನ ನೀಡಲಾಗುತ್ತದೆ. ಈಗ ರಾಜ್ಯದ ಪಾಲಿನ ಅನುದಾನ ನೀಡಲು ಇವರಿಗೆ ಸಾಧ್ಯವಾಗುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಅನುದಾನ ನೀಡಿಲ್ಲವೆಂದಾದರೆ ಹೊಸ ಕಟ್ಟಡಗಳು ಎಲ್ಲಿಂದ ಬಂತು? ಮೂಲಸೌಕರ್ಯ ನೀಡಿಯೇ ವಿವಿಗಳನ್ನು ಆರಂಭಿಸಲಾಗಿತ್ತು. ಆದರೆ ಅದನ್ನು ಮುಂದುವರಿಸಲು ಈಗಿನ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿ ಸದನದಲ್ಲಿ ಈ ಕುರಿತು ಹೋರಾಟ ಮಾಡಲಾಗುವುದು ಎಂದರು.ಇದನ್ನೂ ಓದಿ: ಕೋಲ್ಕತ್ತಾ| ತಂದೆ, ಮಗಳು ನೇಣಿಗೆ ಶರಣು – ಮಗಳ ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ ಶಂಕೆ