ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ನೈತಿಕತೆ ಇದ್ದರೆ, ಮಾನ ಮರ್ಯಾದೆ ಇದ್ದರೆ ಸಿಎಂ ಸೇರಿ ಎಲ್ಲರೂ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Numaraswamy) ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ (BJP-JDS) ಪಾದಯಾತ್ರೆಯನ್ನು ಪಾಪ ತೊಳೆದುಕೊಳ್ಳಲು ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು. ಈ ವೇಳೆ ಸರ್ಕಾರ ಬಂದು ಒಂದೂವರೆ ವರ್ಷ ಆಗಿದೆ. ಸಾಮಾನ್ಯವಾಗಿ ಪಾದಯಾತ್ರೆ ಮಾಡೋದು ಸರ್ಕಾರ ಬಂದು 4 ವರ್ಷ ಕಳೆದ ಮೇಲೆ. ಆ ಸಮಯದಲ್ಲಿ ಲೋಪದೋಷಗಳಾಗಿದ್ದರೆ, ಸಾರ್ವಜನಿಕರ ಪರವಾಗಿ ಹೋರಾಟ ಮಾಡೋದು ಸಹಜ. ರಾಜ್ಯದ ಹಿತಾಸಕ್ತಿಯಿಂದ ಸರ್ಕಾರದ ಅಕ್ರಮ ಖಂಡಿಸಿ ವಿಪಕ್ಷಗಳು ಪಾದಯಾತ್ರೆ, ಪ್ರತಿಭಟನೆ ಮಾಡ್ತೀವಿ. ಆದರೆ ಈ ಸರ್ಕಾರ ಒಂದೂವರೆ ವರ್ಷಗಳಿಂದ ಹಗರಣಗಳಲ್ಲೇ ಮುಳುಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಅನಿವಾರ್ಯವಾಗಿ ಕಾಂಗ್ರೆಸ್ ಸರ್ಕಾರ ನಮ್ಮನ್ನು ಪಾದಯಾತ್ರೆ ಮಾಡಲು ದೂಡಿದೆ. ಎಸ್‌ಟಿ ಸಮುದಾಯದ ಹಣದ ವಾಲ್ಮೀಕಿ ಹಗರಣ (Valmiki Corp Scam) ಬೆಳಕಿಗೆ ಬಂದಿದೆ. 187 ಕೋಟಿ ರೂ. ಹಣ ರಾಜ್ಯದ ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ಇಟ್ಟ ಹಣವನ್ನು ರಾಜ್ಯಗಳ ಚುನಾವಣೆಗೆ ಬಳಕೆ ಮಾಡಿದ್ದಾರೆ. ಅಧಿವೇಶನದಲ್ಲಿ ಸಿಎಂ ಅವರೇ ಇದನ್ನು ಒಪ್ಪಿಕೊಂಡಿದ್ದಾರೆ. 187 ಕೋಟಿ ರೂ. ಅಲ್ಲ, 89 ಕೋಟಿ ರೂ. ಎಂದು. ಮತ್ತೊಂದು ಕಡೆ ಮುಡಾ ಅಕ್ರಮ. ಬಡವರಿಗೆ ಕೊಡಬೇಕಾದ ನಿವೇಶನಗಳಲ್ಲಿ ಸಾವಿರಾರು ಕೋಟಿ ರೂ. ಅಕ್ರಮ ಮಾಡಿದ್ದಾರೆ. ಸ್ವತಃ ರಾಜ್ಯದ ಮುಖ್ಯಮಂತ್ರಿಗಳು, ಅವರ ಕುಟುಂಬ ಈ ಹಗರಣದಲ್ಲಿ ಭಾಗಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ರೈತರಿಗೆ ಹಾಲಿನ ಪೊತ್ಸಾಹಧನವನ್ನು ಈ ಸರ್ಕಾರ 9 ತಿಂಗಳಿಂದ ಕೊಟ್ಟಿಲ್ಲ. 1200 ಕೋಟಿ ರೂ. ಹಣ ಬಾಕಿ ಉಳಿಸಿಕೊಂಡಿದೆ. 2013-18 ರಲ್ಲಿ ಇದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇತ್ತು. ಅಂದು ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವತ್ತು ಕೂಡಾ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆಲ್ಲ ಮೂಲ ಕಾರಣ ಬೆಲೆ ಏರಿಕೆ. ಡೆಂಗ್ಯೂನಂತಹ ಸಣ್ಣ ಕಾಯಿಲೆಯನ್ನು ನಿಯಂತ್ರಣ ಮಾಡಲು ಈ ಸರ್ಕಾರಕ್ಕೆ ಆಗ್ತಾ ಇಲ್ಲ. ಅವರ ತಪ್ಪು ಮುಚ್ಚಿಕೊಳ್ಳಲು ಸದನದಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಈ ಸರ್ಕಾರಕ್ಕೆ ನೈತಿಕತೆ ಇಲ್ಲ ಎಂದು ಅವರು ಕುಟುಕಿದ್ದಾರೆ.
ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾವು ಆಗ್ರಹಿಸುತ್ತೇವೆ. ನಾವು ರಾಜೀನಾಮೆ ಕೊಡಿ ಅಂತ ಹೇಳಿದ ತಕ್ಷಣ ಅವರು ರಾಜೀನಾಮೆ ಕೊಡಲ್ಲ. ಇದು ನ್ಯಾಯಾಂಗ ತನಿಖೆಯಲ್ಲಿ. ನಾವು ಹೋರಾಟ ಮುಂದುವರೆಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.