ರಾಮನಗರ: ಸರ್ಕಾರಿ ನಿಯಮಗಳ ಪ್ರಕಾರ ಬಿ-ಖರಾಬು ಜಮೀನು ಯಾವುದೇ ಖಾಸಗಿ ಸಂಘ, ಸಂಘಟನೆ, ಸಂಸ್ಥೆಗಳಿಗೆ ನೀಡುವಂತಿಲ್ಲ ಎಂಬುದನ್ನ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಕಾನೂನಿನ ನಿಯಮಗಳನ್ನ ಮೀರಿ ಬೆಂಗಳೂರಿನ ಮಹಾತ್ಮ ಗಾಂಧಿ ವಿದ್ಯಾಪೀಠ ಟ್ರಸ್ಟ್ ಗೆ 5 ಎಕ್ರೆ 7 ಗುಂಟೆ ಜಮೀನನ್ನ 2016ರಲ್ಲಿ ಪರಭಾರೆ ಮಾಡಿರುವುದು ಕನಕಪುರ ತಾಲೂಕಿನ ದೇವರ ಕಗ್ಗಲಹಳ್ಳಿ ಬೆಳಕಿಗೆ ಬಂದಿದೆ.
Advertisement
ಕಾಂಗ್ರೆಸ್ ಸರ್ಕಾರವಿದ್ದಾಗ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಬಿ-ಖರಾಬು ಜಮೀನನ್ನು ನಿಯಮ ಕಾನೂನು ಉಲ್ಲಂಘನೆ ಮಾಡಿ ಪ್ರಭಾವಿಗಳ ಟ್ರಸ್ಟ್ ಗೆ ಮಂಜೂರು ಮಾಡಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಬಿ-ಖರಾಬು ಜಮೀನನ್ನ ಸರ್ಕಾರವು ಕಾನೂನುಗಳನ್ನು ಮೀರಿ ಟ್ರಸ್ಟ್ ಗೆ ಪರಭಾರೆ ಮಾಡಿದೆ. ಪ್ರಭಾವಿ ಉದ್ಯಮಿ ಹಾಗೂ ಶಿಕ್ಷಣ ತಜ್ಞರ ಒಡೆತನದ ಬೆಂಗಳೂರಿನ ಮಹಾತ್ಮ ಗಾಂಧಿ ವಿದ್ಯಾಪೀಠ ಟ್ರಸ್ಟ್ ಗೆ ಕೋಟ್ಯಾಂತರ ರೂಪಾಯಿ ಮೌಲ್ಯದ 5 ಎಕ್ರೆ 7 ಗುಂಟೆ ಜಮೀನನ್ನ ಕೇವಲ 5 ಕೋಟಿ ರೂಪಾಯಿಗೆ ಪರಭಾರೆ ಮಾಡಲಾಗಿದೆ.
Advertisement
Advertisement
ಈ ಬಗ್ಗೆ ಈ ಹಿಂದೆಯೇ ರಾಜ್ಯಪಾಲರಿಗೆ ದೂರು ನೀಡಿದ್ದು, ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಅವಧಿಯಲ್ಲಿ ರಾಜ್ಯಪಾಲರು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಜನವರಿಯಲ್ಲಿ ಭ್ರಷ್ಟಚಾರ ನಿಗ್ರಹ ದಳಕ್ಕೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ದೂರು ನೀಡಿದ್ದು, ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು.
Advertisement
ಸಿದ್ದರಾಮಯ್ಯ ಸರ್ಕಾರದಲ್ಲಿ 2015ರಲ್ಲಿ ಹೇಮಚಂದ್ರ ಸಾಗರ್ ಎಂಬವರ ನೇತೃತ್ವದ ಮಹಾತ್ಮ ಗಾಂಧಿ ವಿದ್ಯಾಪೀಠ ಟ್ರಸ್ಟ್ ಗೆ 5 ಎಕ್ರೆ 7 ಗುಂಟೆ ಬಿ-ಖರಾಬು ಜಮೀನನ್ನ ಪರಭಾರೆ ಮಾಡಲಾಗಿದೆ. ಬಿ-ಖರಾಬು ಜಮೀನನ್ನ ಯಾವುದೇ ಸಂಘ, ಸಂಸ್ಥೆ, ಸಂಘಟನೆಗಳಿಗೆ ನೀಡಬಾರದು ಎಂಬ ಕಾನೂನಿದೆ. ಆದ್ರೆ ಈ ಕಾನೂನನ್ನ ಗಾಳಿಗೆ ತೂರಿ ಸಿದ್ದರಾಮಯ್ಯ ಸರ್ಕಾರ ಕೋಟ್ಯಾಂತರ ರೂಪಾಯಿ ಬೆಲೆಯ ಜಮೀನನ್ನ ಶೇ 25% ರಂತೆ ಕೇವಲ 5 ಕೋಟಿ ರೂಪಾಯಿಗೆ ಪರಭಾರೆ ಮಾಡಲಾಗಿದೆ.
ಹೆದ್ದಾರಿ ಪಕ್ಕದಲ್ಲಿನ ಈ ಜಮೀನು ಸುಮಾರು 50 ಕೋಟಿ ರೂಪಾಯಿ ಮೌಲ್ಯವನ್ನ ಹೊಂದಿದ್ದು ಹರಾಜು ಪ್ರಕ್ರಿಯೆಯಾಗಲಿ, ಸರ್ಕಾರದಿಂದ ಹೆಚ್ಚಿನ ಹಣವನ್ನ ವಸೂಲಿ ಮಾಡಿ ಮಾರಾಟ ಮಾಡುವಂತಹ ಪ್ರಕ್ರಿಯೆ ನಡೆದಿಲ್ಲ. ಈ ಭಾಗದ ಜನರು ನಿವೇಶನಗಳಿಗಾಗಿ ಸಾಕಷ್ಟು ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದೇ ನೇರವಾಗಿ ಭೂಮಿಯನ್ನ ಪರಭಾರೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳೇ ಶಾಮೀಲಾಗಿ ಭೂಮಿ ಪರಭಾರೆ ಮಾಡಿದ್ದಾರೆಂಬ ಆರೋಪ ಕೇಳಿಬರುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ದೂರು ನೀಡಲಾಗಿದೆ.