ನವದೆಹಲಿ: ಕಾಂಗ್ರೆಸ್ ಪಿಒಕೆಯನ್ನು (ಪಾಕ್ ಆಕ್ರಮಿತ ಕಾಶ್ಮೀರ) ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿದೆ. ಅದನ್ನು ನಾವು ಮರಳಿ ಪಡೆಯುತ್ತೇವೆ ಎಂದು ವಿಪಕ್ಷಗಳಿಗೆ ಕೇಂದ್ರ ಸಚಿವ ಅಮಿತ್ ಶಾ (Amit Shah) ಖಡಕ್ ಸಂದೇಶ ರವಾನಿಸಿದ್ದಾರೆ.
ರಾಜ್ಯಸಭೆಯಲ್ಲಿ ಆಪರೇಷನ್ ಸಿಂಧೂರ ಕುರಿತ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ಉಗ್ರರನ್ನು ಬೇಟೆಯಾಡಿದ ಆಪರೇಷನ್ ಮಹಾದೇವ್ ಬಗ್ಗೆ ವಿವರ ನೀಡಿದ್ದಾರೆ. ಇದನ್ನೂ ಓದಿ: ಪಾಕ್ ಭಯೋತ್ಪಾದನೆಗೆ ಶಾಶ್ವತ ಬೆಂಬಲ ತ್ಯಜಿಸುವವರೆಗೆ ಸಿಂಧೂ ಜಲ ಒಪ್ಪಂದ ಅಮಾನತು: ಜೈಶಂಕರ್
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರಾಣ ಕಳೆದುಕೊಂಡವರ ಸಂಬಂಧಿಕರಿಂದ ನನಗೆ ಬಹಳಷ್ಟು ಕರೆಗಳು ಬಂದವು. ಅವರು ಈ ಭಯೋತ್ಪಾದಕರ ತಲೆಗೆ ಗುಂಡು ಹಾರಿಸಿ ಕೊಲ್ಲುವಂತೆ ನನ್ನನ್ನು ವಿನಂತಿಸಿದ್ದರು. ನಮ್ಮ ಅಧಿಕಾರಿಗಳು ಅವರ ತಲೆಗೆ ಗುಂಡು ಹಾರಿಸಿ ಕೊಂದಿದ್ದಾರೆಂದು ತಿಳಿಸಿದ್ದಾರೆ.
ಆಪರೇಷನ್ ಮಹಾದೇವ್‌ನಲ್ಲಿ ಹತ್ಯೆಗೀಡಾದ 3 ಭಯೋತ್ಪಾದಕರ ಗುರುತು ಪತ್ತೆಯಾಗಿದೆ. ಪಹಲ್ಗಾಮ್ ದಾಳಿಯಲ್ಲಿ ಲಷ್ಕರ್-ಎ-ತೈಬಾದ ಕೈವಾಡವನ್ನು ದೃಢಪಡಿಸಿದೆ ಎಂದು ಅಮಿತ್ ಶಾ ವಿವರಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ ಹೊಣೆಯನ್ನ ಟಿಆರ್‌ಎಫ್ 2 ಬಾರಿ ಹೊತ್ತುಕೊಂಡಿದೆ: ವಿಶ್ವಸಂಸ್ಥೆ
ಸ್ಥಳದಲ್ಲಿ ವಶಪಡಿಸಿಕೊಂಡ ಗುಂಡುಗಳ ಕವಚಗಳು ಪಹಲ್ಗಾಮ್‌ನಲ್ಲಿ ಪತ್ತೆಯಾದ ಕವಚಗಳೊಂದಿಗೆ ಶೇ.99 ರಷ್ಟು ಹೊಂದಿಕೆಯಾಗುತ್ತವೆ ಎಂದು ಹೇಳಿದ್ದಾರೆ. ಕಾಶ್ಮೀರ ಭಯೋತ್ಪಾದನೆಯಿಂದ ಮುಕ್ತವಾಗಲಿದೆ ಎಂಬ ಬಲವಾದ ಸಂದೇಶವನ್ನು ನಾನು ನೀಡಲು ಬಯಸುತ್ತೇನೆ ಎಂದಿದ್ದಾರೆ.
ಗೃಹ ಸಚಿವರ ಭಾಷಣಕ್ಕೂ ಮುನ್ನ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಉಪಸ್ಥಿತರಿಲ್ಲ, ಚರ್ಚೆಗೆ ಉತ್ತರಿಸುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು. ನಂತರ ಪಕ್ಷವು ಸಚಿವರ ಪ್ರತಿಕ್ರಿಯೆಯನ್ನು ನಿರ್ಲಕ್ಷಿಸಿ ಸಭಾತ್ಯಾಗ ಮಾಡಿತು.