ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಆಯ್ತು ಇದೀಗ ಭೈರತಿ ಬಸವರಾಜ್ ಬಲಗೈ ಬಂಟ ದರ್ಪ ಪ್ರದರ್ಶಿಸಿರೋ ಘಟನೆ ಬೆಳಕಿಗೆ ಬಂದಿದೆ.
ಖಾತೆ ಮಾಡಿಕೊಡದಿದ್ದರೆ ಬಿಬಿಎಂಪಿ ಕಚೇರಿಗೆ ಬೆಂಕಿ ಹಚ್ಚಿಬಿಡ್ತೀನಿ ಅಂತ ಭೈರತಿ ಬಸವರಾಜ್ ಬಂಟ ಬೆದರಿಕೆ ಹಾಕಿದ್ದಾನೆ. ಕೆ.ಆರ್.ಪುರಂ ಬಿಬಿಎಂಪಿ ಕಚೇರಿಯಲ್ಲಿ ಈ ಘಟನೆ ನಡೆದಿದೆ.
ಅಕ್ರಮ ಜಮೀನಿಗೆ ಖಾತೆ ಮಾಡಿಕೊಡುವಂತೆ ಅಧಿಕಾರಿಗೆ ಒತ್ತಡ ಹಾಕಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿ ಬಿಬಿಎಂಪಿ ಕಚೇರಿ ಒಳಗೆ ಪೆಟ್ರೋಲ್ ಸುರಿದಿದ್ದು, ಬೆಂಕಿ ಹಚ್ಚೋದಾಗಿ ಬೆದರಿಕೆ ಹಾಕಿದ್ದಾನೆ. ಸಿಎಂ ಮತ್ತು ಭೈರತಿ ಬಸವರಾಜ್ ಕೃಪಾಕಟಾಕ್ಷದಿಂದ ಬೆಂಗಳೂರು ಜಲಮಂಡಳಿ ಸದಸ್ಯನಾಗಿರುವ ನಾರಾಯಣಸ್ವಾಮಿ, ಬಿಬಿಎಂಪಿ ಕಚೇರಿಗೆ ಅಧಿಕಾರಿ ಮುಂದೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ.
ಏನಿದು ಘಟನೆ?: ಕೆಆರ್ ಪುರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನೂ ಆಗಿರುವ ನಾರಾಯಣಸ್ವಾಮಿ ಎನ್‍ಆರ್‍ಐ ಬಡಾವಣೆಯ ಜಮೀನು ವಿಚಾರದಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಡುವಂತೆ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಚೆಂಗಲ್ ರಾಯಪ್ಪಗೆ ಒತ್ತಡ ಹಾಕಿದ್ದ. ಜಮೀನು ವ್ಯಾಜ್ಯ ಕೋರ್ಟ್‍ನಲ್ಲಿದೆ, ಅಕ್ರಮವಾಗಿ ಖಾತೆ ಮಾಡಿಕೊಡಲ್ಲ ಎಂದು ಚೆಂಗಲ್ ರಾಯಪ್ಪ ಹೇಳಿದ್ದರು. ಹೀಗಾಗಿ ಕಳೆದ ಫೆಬ್ರವರಿ 16ರಂದು ಬೆಳಗ್ಗೆ 11 ಗಂಟೆ ವೇಳೆಯಲ್ಲಿ ಹೊರಮಾವು ನಲ್ಲಿರುವ ಬಿಬಿಎಂಪಿ ಕಚೇರಿಗೆ ನುಗ್ಗಿದ ನಾರಾಯಣಸ್ವಾಮಿ, ಎಆರ್‍ಒ ಚೆಂಗಲ್ ರಾಯಪ್ಪ ಮುಂದೆಯೇ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಖಾತೆ ಮಾಡಿಕೊಡದಿದ್ರೆ ಕಚೇರಿಯಲ್ಲಿರುವ ದಾಖಲೆಗಳನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ.
ಚೆಂಗಲ್ ರಾಯಪ್ಪ ಖಡಕ್ ಅಧಿಕಾರಿ ಅಂತ ಗುರುತಿಸಿಕೊಂಡಿದ್ದ ವ್ಯಕ್ತಿಯಾಗಿದ್ದು, ಪೆಟ್ರೋಲ್ ಹಾಕೋದಾಗಿ ಬೆದರಿಸಿದ್ರೂ ಅವರು ಹೆದರಿರಲಿಲ್ಲ. ಎರಡು ದಿನಗಳ ಹಿಂದೆ ಚೆಂಗಲ್ ರಾಯಪ್ಪರನ್ನ ಅವರನ್ನ ವರ್ಗಾವಣೆ ಮಾಡಲಾಗಿದೆ. ಸಿಎಂ ಮತ್ತು ಭೈರತಿ ಬಸವರಾಜ್ ಪ್ರಭಾವ ಬಳಸಿ ಚೆಂಗಲ್ ರಾಯಪ್ಪರನ್ನ ನಾರಾಯಣಸ್ವಾಮಿ ವರ್ಗಾವಣೆ ಮಾಡಿಸಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಜಂಟಿ ಆಯುಕ್ತೆ ಪೊರ್ಣಿಮಾ ವಾಸಂತಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ದೂರು ನೀಡಲು ಹೇಳಿದ್ದೆವು. ಅಂದೇ ಶಾಸಕರಾದ ಭೈರತಿ ಬಸವರಾಜ್, ನಾರಾಯಣಸ್ವಾಮಿಯನ್ನ ಕರೆದು ಬುದ್ಧಿವಾದ ಹೇಳಿದ್ದಾರೆ. ನಾವು ಸೆಟ್ಲ್‍ಮೆಂಟ್ ಮಾಡ್ಕೊಳ್ತೀವಿ ಎಂದು ಹೇಳಿದ್ದಾರೆ.