ನವದೆಹಲಿ: ಜುಲೈ 17 ರಂದು ಪ್ರಕಟಿಸಿದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಬುಧವಾರ ನೀಡಿದ ಆದೇಶದಲ್ಲಿ ಸದನಕ್ಕೆ ಬರಬೇಕೋ? ಬೇಡವೋ ಎನ್ನುವುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ. ಅವರನ್ನು ಬಲವಂತವಾಗಿ ಸದನಕ್ಕೆ ಬರುವಂತೆ ಒತ್ತಡ ಹಾಕುವಂತಿಲ್ಲ ಎಂದು ಸುಪ್ರೀಂ ಹೇಳಿತ್ತು.
ಕಾಂಗ್ರೆಸ್ ನಾಯಕರು ವಿಪ್ ಜಾರಿಗೊಳಿಸುವ ಮೂಲಕ ಶಾಸಕರನ್ನು ಸದನಕ್ಕೆ ಬರುವಂತೆ ಮಾಡಬಹುದು ಎನ್ನುವ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಸುಪ್ರೀಂ ತನ್ನ ಮಧ್ಯಂತರ ಆದೇಶದಲ್ಲಿ ವಿಪ್ ಬಗ್ಗೆ ಯಾವುದೇ ಸ್ಪಷ್ಟವಾದ ಅಂಶವನ್ನು ತಿಳಿಸದ ಕಾರಣ ಈಗ ಕಾಂಗ್ರೆಸ್ ಮತ್ತೊಮ್ಮೆ ಕೋರ್ಟ್ ಮೆಟ್ಟಿಲೇರಿ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಮನವಿ ಸಲ್ಲಿಸಿದೆ.
ವಿಪ್ ಜಾರಿ ವಿಚಾರದಲ್ಲಿ ಕೆಲ ಗೊಂದಲಗಳಿವೆ. ಅತೃಪ್ತರು ಸದನಕ್ಕೆ ಹಾಜರಾಗಬೇಕಿಲ್ಲ ಎಂಬ ಆದೇಶದಿಂದ ನಮ್ಮ ಸಾಂವಿಧಾನಿಕ ಹಕ್ಕಿಗೆ ಧಕ್ಕೆಯಾಗಿದೆ. ಈ ಆದೇಶ 10ನೇ ಷೆಡ್ಯೂಲ್ ಅಡಿಯಲ್ಲಿ ಪಕ್ಷಕ್ಕೆ ನೀಡಲಾದ ಅಧಿಕಾರವನ್ನು ಕಿತ್ತುಕೊಂಡಿದೆ. ಹೀಗಾಗಿ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿ ಎಂದು ಕೋರಿ ಅರ್ಜಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮನವಿ ಮಾಡಿಕೊಂಡಿದ್ದಾರೆ.