ಬೆಂಗಳೂರು: ಮಂಡ್ಯ ಸಂಸದೆ ಸುಮಲತಾರನ್ನು ಕೆ.ಆರ್.ಪೇಟೆಯ ಮಾಜಿ ಕಾಂಗ್ರೆಸ್ ಶಾಸಕ ಕೆ.ಬಿ.ಚಂದ್ರಶೇಖರ್ ಅವರು ಭೇಟಿ ಮಾಡಿದ್ದು, ಉಪಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಮಾಜಿ ಸಚಿವ ನರೇಂದ್ರ ಸ್ವಾಮಿ ಹಾಗೂ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರೊಂದಿಗೆ ಕೆ.ಬಿ.ಚಂದ್ರಶೇಖರ್ ಸುಮಲತಾ ನಿವಾಸಕ್ಕೆ ಭೇಟಿ ನೀಡಿ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕೆ.ಬಿಚಂದ್ರಶೇಖರ್ ರಾವ್, ಸುಮಲತಾ ಅವರು ಸಂಸದರಾದಾಗ ಕಾಂಗ್ರೆಸ್ ಕಾರ್ಯಕರ್ತರು ಅವರಿಗೆ ಬೆಂಬಲ ನೀಡಿದ್ದರು. ಈಗ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಎಂದು ಕೇಳಲು ಬಂದಿದ್ದೇವೆ. ಅವರು ಬೆಂಬಲ ನೀಡುವ ಕುರಿತು 2 ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಿ ಸಹಾಯ ಮಾಡಿದ್ದಾರೆ ಎಂದು ಸುಮಲತಾ ಅವರು ಹೇಳಿ ಕಾರ್ಯಕರ್ತರ ಸಹಾಯ ನೆನಪಿಸಿಕೊಂಡರು.
ಇದೇ ವೇಳೆ ನಾರಾಯಣ ಗೌಡ ಬೆಂಬಲ ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದ ಅವರು, ಸಂಸದರಾಗಿ ಚುನಾವಣೆಗೆ ನಿಂತುಕೊಂಡಾಗ ಸುಮಲತಾರನ್ನು ಟೀಕೆ ಮಾಡಿದ್ದರು. ಚಿತ್ರರಂಗದವರು ಎಂದು ಟೀಕಿಸಿದ್ದರು. ಇದನ್ನೆಲ್ಲಾ ಸಂಸದರು ಗಮನದಲ್ಲಿ ಇಟ್ಟುಕೊಂಡಿದ್ದು, ಅವರು ನಮಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ. ಪಕ್ಷದ ಹೈಕಮಾಂಡ್ ಯಾರನ್ನು ಅಭ್ಯರ್ಥಿ ಮಾಡಿದರು ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.