ರಾಜ್ಯದ 9 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೈತ್ರಿ ಇರಲ್ಲ!

Public TV
2 Min Read
CONGRESS JDS COLLAGE

ಬೆಂಗಳೂರು: 2019 ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಮಹಾಮೈತ್ರಿಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ 250 ಸ್ಥಾನಗಳಲ್ಲಿ ಮಾತ್ರ ಸ್ಪರ್ಧೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಈ 250 ಕ್ಷೇತ್ರಗಳಲ್ಲಿ 44 ಕ್ಷೇತ್ರಗಳು ಕಳೆದ ಬಾರಿ ಗೆದ್ದ ಕ್ಷೇತ್ರಗಳಾಗಿದ್ದು, ಇವುಗಳಲ್ಲಿ ಮೈತ್ರಿಗೆ ಮುಂದಾಗುವುದಿಲ್ಲ ಎನ್ನಲಾಗಿದೆ. ಸದ್ಯ `ಕೈ’ ಹೈಕಮಾಂಡ್ ಈ ನಿರ್ಧಾರಕ್ಕೆ ಬಲವಾಗಿ ಅಂಟಿಕೊಂಡರೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ ಎನ್ನುವ ವಿಶ್ಲೇಷಣೆ ಈಗ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

ಹೌದು, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡಿದೆ. ಅಲ್ಲದೇ ಮುಂದಿನ ಲೋಕಸಭಾ ಚುನಾವಣೆಗೂ ಈ ಮೈತ್ರಿ ಮಾಡಲು ಕಾಂಗ್ರೆಸ್ ಮುಂದಾಗಿದೆ. ಆದರೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಈಗ ಪ್ರಾಬಲ್ಯ ಹೊಂದಿರುವ ಕಾರಣ ಕೇತ್ರಗಳ ಹಂಚಿಕೆ ಕಗ್ಗಂಟಾಗುವ ಸಾಧ್ಯತೆಯಿದೆ.

13THRAHULGANDHIdf

ಕಳೆದ 2014 ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯ ನಡುವೆಯೂ ಕೋಲಾರ ಕ್ಷೇತ್ರದಿಂದ ಕೆಎಚ್ ಮುನಿಯಪ್ಪ, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ವೀರಪ್ಪ ಮೊಯ್ಲಿ, ತುಮಕೂರಿನಿಂದ ಮುದ್ದಹನುಮೆಗೌಡ, ಚಾಮರಾಜನಗರದಿಂದ ಆರ್ ಧೃವನಾರಯಣ್, ಬೆಂಗಳೂರು ಗ್ರಾಮಾಂತರ ಡಿಕೆ ಸುರೇಶ್, ಚಿಕ್ಕೋಡಿಯಿಂದ ಪ್ರಕಾಶ್ ಹುಕ್ಕೇರಿ, ಚಿತ್ರದುರ್ಗದಿಂದ ಬಿಎನ್ ಚಂದ್ರಪ್ಪ, ಕಲಬುರಗಿಯಿಂದ ಮಲ್ಲಿಕಾರ್ಜುನ ಖರ್ಗೆ, ರಾಯಚೂರಿನಿಂದ ಬಿವಿ ನಾಯಕ್ ಜಯಗಳಿಸಿದ್ದರು. ವಿಶೇಷ ಏನೆಂದರೆ ಕೆಲ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಮುಂದೆ ಪೈಪೋಟಿ ಎದುರಿಸಿ ಕೈ ನಾಯಕರು ಜಯಗಳಿಸಿದ್ದರು.

ಹೈಕಮಾಂಡ್ ಲೋಕಾಸಭಾ ಚುನಾವಣೆ ಮೈತ್ರಿ ಕುರಿತು ಘೋಷಣೆ ಮಾಡುತ್ತಿದಂತೆ ಕಾಂಗ್ರೆಸ್ ನಲ್ಲೂ ಅಸಮಾಧಾನದ ಮಾತು ಕೇಳಿ ಬಂದಿತ್ತು. ಒಂದೊಮ್ಮೆ ಮೈತ್ರಿಗೆ ಮುಂದಾದರೆ ಮೈಸೂರು(ಪ್ರತಾಪ್ ಸಿಂಹ), ಮಂಡ್ಯ (ಸಿಎಸ್ ಪುಟ್ಟರಾಜು), ಹಾಸನ (ಎಚ್‍ಡಿ ದೇವೇಗೌಡ) ಕ್ಷೇತ್ರಗಳನ್ನು ಮಾತ್ರ ಕೊಡಬಹುದು. ಆದರೆ ಕೇವಲ ಮೂರು ಕ್ಷೇತ್ರಗಳಿಗೆ ಮಾತ್ರ ಜೆಡಿಎಸ್ ಮೈತ್ರಿ ನಡೆಸುವುದು ಅನುಮಾನ ಎನ್ನುವ ವಿಶ್ಲೇಷಣೆ ಅಂದೇ ಕೇಳಿಬಂದಿತ್ತು.

leaders

ಗೆದ್ದ ಕ್ಷೇತ್ರಗಳಲ್ಲಿ ಹಾಲಿ ಜಯಗಳಿಸಿದ ಪಕ್ಷದ ಅಭ್ಯರ್ಥಿ ನಿಲ್ಲಬೇಕು ಮತ್ತು ಉಳಿದ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಯಾಗಿ ಒಮ್ಮತದ ಅಭ್ಯರ್ಥಿಯಾಗಿ ನಿಂತರೆ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಹಳೆ ಮೈಸೂರು ಭಾಗದಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದೆ. ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಗೆದ್ದಿರುವ ಲೋಕಸಭಾ ಕ್ಷೇತ್ರಗಳ ಪೈಕಿ ಕೆಲವನ್ನು ನಮಗೆ ಬಿಟ್ಟುಕೊಡಿ ಎಂದು ಕೇಳಿದರೆ ಕಾಂಗ್ರೆಸ್ ನಿಲುವು ಏನು ಎನ್ನುವ ಪ್ರಶ್ನೆ ಈಗ ಎದ್ದಿದೆ. ಇದನ್ನು ಓದಿ: ಮೋದಿ ಅಲೆ ಎದುರಿಸಲು ರಾಹುಲ್ ಬಿಗ್ ಪ್ಲಾನ್ – ಕೊನೆಗೂ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ ಅನ್ನೋದು ನಿರ್ಧಾರವಾಯ್ತು! 

ಈ ಚರ್ಚೆಯ ನಡುವೆ ಶುಕ್ರವಾರ ಸಿಎಂ ಕುಮಾರಸ್ವಾಮಿಯವರು ಇನ್ನು ಒಂದು ವರ್ಷ ನನ್ನನ್ನು ಯಾರು ಟಚ್ ಮಾಡಲು ಸಾಧ್ಯವಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆ ವೇಳೆ ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಯಾವ ರೀತಿ ಮೈತ್ರಿ ಮಾಡಿಕೊಳ್ಳಲಿದೆ ಎನ್ನುವ ಕುತೂಹಲ ಈಗ ಹೆಚ್ಚಾಗಿದೆ.

DKS HDK

Share This Article
Leave a Comment

Leave a Reply

Your email address will not be published. Required fields are marked *