ನವದೆಹಲಿ: ಇಡಿ ವಿಚಾರಣೆಯಿಂದ ಪಾರಾಗಲು ಡಿ.ಕೆ ಶಿವಕುಮಾರ್ ಪತ್ನಿ ಉಷಾ ಮತ್ತು ತಾಯಿ ಗೌರಮ್ಮ ಹೊಸ ಪ್ಲಾನ್ ಮಾಡಿಕೊಂಡಿದ್ದಾರೆ. ಇಡಿ ನೀಡಿದ್ದ ಸಮನ್ಸ್ ರದ್ದು ಕೋರಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು ಇಂದು ವಿಚಾರಣೆ ಬರಲಿದೆ. ಇದರ ನಡುವೆ ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರ ವಿಚಾರಣೆ ಕೂಡ ನಡೆಯಲಿದೆ.
ಹೌದು. ಅಕ್ರಮ ಹಣ ವರ್ಗಾವಣೆ ಬೇನಾಮಿ ಆಸ್ತಿ ಗಳಿಕೆ ಆರೋಪದಲ್ಲಿ ಜೈಲು ಸೇರಿರುವ ಡಿ.ಕೆ ಶಿವಕುಮಾರ್ ಒಂದು ಕಡೆ ಜಾಮೀನಿ ಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಮತ್ತೊಂದು ಕಡೆ ಇಡಿ ವಿಚಾರಣೆ ಕುಣಿಕೆ ಡಿ.ಕೆ ಕುಟುಂಬಕ್ಕೆ ವಿಸ್ತರಣೆ ಆಗಿದ್ದು ಡಿ.ಕೆ ಶಿವಕುಮಾರ್ ಪತ್ನಿ ಉಷಾ, ತಾಯಿ ಗೌರಮ್ಮಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಮಂಗಳವಾರ ಅನಾರೋಗ್ಯದ ಕಾರಣ ಕೊಟ್ಟು ವಿಚಾರಣೆಯಿಂದ ದೂರ ಉಳಿದಿಕೊಂಡಿದ್ದ ಗೌರಮ್ಮ ಹಾಗೂ ಉಷಾ, ಈಗ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Advertisement
Advertisement
ಇಡಿ ಅಧಿಕಾರಿಗಳು ನೀಡಿರುವ ಸಮನ್ಸ್ ರದ್ದು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದು ಇಂದು ಆ ಅರ್ಜಿ ವಿಚಾರಣೆಗೆ ಬರಲಿದೆ. ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದ್ದು ಸಮನ್ಸ್ ರದ್ದು ಮಾಡುವ ಸಂಬಂಧ ಮಹತ್ವದ ತೀರ್ಪು ನೀಡಲಿದ್ದಾರೆ. ಅಕ್ಟೋಬರ್ 17ಕ್ಕೆ ಉಷಾ ಅವರಿಗೂ ವಿಚಾರಣೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೆ ಸದ್ಯಕ್ಕೆ ವಿಚಾರಣೆಗೆ ಬರಲು ಸಾಧ್ಯವಾಗಿಲ್ಲ ಬೇರೆ ದಿನಾಂಕ ನೀಡುವಂತೆ ಇಡಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: 100 ರೂ. ಇದ್ದ ಆಸ್ತಿ ಮೌಲ್ಯ ಈಗ 1 ಸಾವಿರಕ್ಕೆ ಏರಿಕೆಯಾಗಿದೆ, ಅಕ್ರಮ ಹೇಗೆ ಆಗುತ್ತೆ – ಸಿಂಘ್ವಿ ಪ್ರಶ್ನೆ
Advertisement
Advertisement
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರ ವಿಚಾರಣೆ ಕೂಡ ಇಂದು ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ದೆಹಲಿಯ ಲೋಕನಾಯಕ್ ಭವನದಲ್ಲಿರುವ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗಲಿದ್ದಾರೆ. ವಾರದ ಹಿಂದೆ ಸುಮಾರು 2 ಗಂಟೆ ವಿಚಾರಣೆಗೆ ಒಳಪಟ್ಟಿದ್ದ ರಾಜಣ್ಣ, ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷಾ ಶುಗರ್ ಫ್ಯಾಕ್ಟರಿ ಆರಂಭಕ್ಕೆ ನೀಡಿದ ಸಾಲದ ಬಗ್ಗೆ ದಾಖಲೆ ಕೇಳಿದ್ರು. ಕೋಪರೇಟಿವ್ ಬ್ಯಾಂಕುಗಳು ತಮ್ಮ ವ್ಯಾಪ್ತಿ ಮೀರಿ ಸಾಲ ನೀಡುವಂತಿಲ್ಲ. ಈ ನಿಯಮದ ನಡುವೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಹರ್ಷಾ ಶುಗರ್ ಫ್ಯಾಕ್ಟರಿಗೆ ಸಾಲ ನೀಡಲು ಕಾರಣ ಏನು ಮತ್ತು ಪ್ರಮೊಟರ್ಸ್ ಈಕ್ವಿಟಿಯ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ಬಗ್ಗೆ ಇಂದು ಇಡಿ ಅಧಿಕಾರಿಗಳಿಗೆ ರಾಜಣ್ಣ ದಾಖಲೆ ಸಮೇತ ಉತ್ತರ ಕೊಡಲಿದ್ದಾರೆ. ಅಲ್ಲದೆ ರಾಜಣ್ಣ ತಮ್ಮ ಕುಟುಂಬದ 6 ವರ್ಷದ ಆದಾಯ ತೆರಿಗೆ ಮಾಹಿತಿಯನ್ನು ಕೂಡ ನೀಡಲಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷಾ ಶುಗರ್ ಫ್ಯಾಕ್ಟರಿಯಲ್ಲಿ ಡಿ.ಕೆ ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಆಗಿರುವ ವಾಸನೆ ಹುಡುಕುತ್ತಿರುವ ಇಡಿ ಅಧಿಕಾರಿಗಳಿಗೆ ರಾಜಣ್ಣ ಹೇಳಿಕೆ ಪ್ರಮುಖವಾಗಿದ್ದು ಈ ಹೇಳಿಕೆ ಪ್ರಕರಣಕ್ಕೆ ಮತ್ತೊಂದು ತಿರುವು ನೀಡುವ ಸಾಧ್ಯತೆ ಇದೆ.