ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸಂಪುಟ ಪುನಾರಚನೆ ಮತ್ತು ಕ್ರಾಂತಿಯ ಚರ್ಚೆ ಮಧ್ಯೆ ಔತಣ ಕೂಟಗಳೂ ಸದ್ದು ಮಾಡುತ್ತಿವೆ. ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಆಪ್ತರಿಗೆ ಮಾಜಿ ಸಚಿವ ಕೆ ಎನ್ ರಾಜಣ್ಣ (KN Rajanna) ಕರೆದಿದ್ದ ತುಮಕೂರು ಔತಣ ಕೂಟ (Tumakuru Dinner Meeting) ಮಿಸ್ ಆಗಿತ್ತು. ಈಗ ರಾಜಣ್ಣ ಮನೆಯಿಂದ ಸಂಸದ ರಾಜಶೇಖರ್ ಹಿಟ್ನಾಳ್ ಅವರ ದೆಹಲಿ ನಿವಾಸಕ್ಕೆ ಶಿಫ್ಟ್ ಆಗಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಬಿಹಾರ ಫಲಿತಾಂಶ ಮುಗಿದ ಬೆನ್ನಲ್ಲೇ ದೆಹಲಿ ಅಂಗಳದಲ್ಲೇ ರಾಜಕೀಯ ದಾಳಗಳನ್ನು ಉರುಳಿಸುವ ಸುಳಿವು ಕೊಟ್ಟಿದ್ದಾರೆ.
ರಾಜ್ಯ ಕಾಗ್ರೆಸ್‌ನಲ್ಲಿ ಪವರ್ ಶೇರ್ ಮತ್ತು ಪುನಾರಚನೆ ಜಪ ಜೋರಾಗಿದೆ. ಸಿಎಂ ಮತ್ತು ಡಿಸಿಎಂ ತಮ್ಮ ಅಂತಿಮ ಹಂತದ ದಾಳಗಳನ್ನು ದೆಹಲಿಯಲ್ಲೇ (Delhi) ಪ್ರಯೋಗಿಸಲು ವೇದಿಕೆಯೂ ಸಿದ್ಧಗೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯನವರು ಬಿಹಾರ ಫಲಿತಾಂಶ ಬಂದ ಮಾರನೇ ದಿನ ಅಂದ್ರೆ ನವೆಂಬರ್ 15 ರಂದೇ ದೆಹಲಿ ಫ್ಲೈಟ್ ಹತ್ತುತ್ತಿದ್ದಾರೆ.
ಸಿಎಂ ಮತ್ತು ಆಪ್ತರಿಗೆ ದೆಹಲಿಯಲ್ಲಿ ರಾಜಕೀಯ ಲೆಕ್ಕಾಚಾರಗಳನ್ನು ಹೆಣೆಯಲು ಸಂಸದ ರಾಜಶೇಖರ್ ಹಿಟ್ನಾಳ್ (Rajashekar Hitnal) ಭರ್ಜರಿ ವೇದಿಕೆ ಒದಗಿಸಿ ಕೊಡಲಿದ್ದಾರೆ. ಸಂಸದ ರಾಜಶೇಖರ್ ಹಿಟ್ನಾಳ್ ಅವರು ದೆಹಲಿಗೆ ಬರುತ್ತಿರುವ ಸಿಎಂ ಮತ್ತು ಆಪ್ತರಿಗೆ ತಮ್ಮ ನಿವಾಸದಲ್ಲೇ ಡಿನ್ನರ್ ಕೂಟ ಆಯೋಜಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಆರ್‌ಎಸ್‌ಎಸ್ ಯಾಕೆ ನೋಂದಣಿಯಾಗಿಲ್ಲ? ಸಂಘಕ್ಕೆ ಮುಸ್ಲಿಮರನ್ನು ಸೇರಿಸಿಕೊಳ್ಳಲು ಅವಕಾಶ ಇದ್ಯಾ? ಪ್ರಶ್ನೆಗೆ ಉತ್ತರ ನೀಡಿದ ಮೋಹನ್ ಭಾಗವತ್
ಶುಕ್ರವಾರ ಮಾಜಿ ಸಚಿವ ಕೆ ಎನ್ ರಾಜಣ್ಣ ತುಮಕೂರಿನ ತಮ್ಮ ಮನೆಯಲ್ಲಿ ಸಿಎಂ ಮತ್ತು ಆಪ್ತರಿಗೆ ಔತಣ ಕೂಟ ಆಯೋಜಿಸಿದ್ದರು. ಆದರೆ ಕಬ್ಬು ಬೆಳೆಗಾರರ ಹೋರಾಟ, ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಸಭೆ ಹಿನ್ನೆಲೆಯಲ್ಲಿ ಸಿಎಂ ಅವರು ಆ ಔತಣ ಕೂಟಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಈಗ ರಾಜಣ್ಣ ಮನೆಯಿಂದ ದೆಹಲಿಗೆ ಔತಣ ಕೂಟ ರಾಜಕೀಯ ಶಿಫ್ಟ್ ಆಗಿದೆ.
ಸಿಎಂ ದೆಹಲಿ ಪ್ರವಾಸದಲ್ಲಿ ಡಿನ್ನರ್ ಮೀಟಿಂಗ್ ಶಕ್ತಿ ಪ್ರದರ್ಶನದ ಮೀಟಿಂಗ್ ಆಗಲಿದೆ ಎನ್ನಲಾಗಿದೆ. ಪವರ್ ಶೇರ್ ಮಾತುಕತೆ ನಡುವೆ ದೆಹಲಿ ಅಂಗಳದಲ್ಲಿ ಕುಳಿತೇ ಸಿಎಂ ತಂತ್ರಗಾರಿಕೆ ರೂಪಿಸ್ತಾರೆ ಎನ್ನಲಾಗಿದೆ. ಡಿನ್ನರ್ ಮೀಟಿಂಗ್ ದೆಹಲಿಗೆ ಶಿಫ್ಟ್ ಆಗಿರುವುದು ಸಿಎಂ ಮತ್ತು ಆಪ್ತರು ಪಕ್ಕಾ ಲೆಕ್ಕಾಚಾರದೊಂದಿಗೆ ಅಖಾಡಕ್ಕೆ ಇಳಿಯುವ ಸಿದ್ದತೆ ಎನ್ನಲಾಗುತ್ತಿದೆ. ಈ ಡಿನ್ನರ್ ಸಭೆ ಮೂಲಕ ಸಿಎಂ ಕೈ ಬಲಪಡಿಸುವುದು, ಸಿಎಂ ಪರ ಗಟ್ಟಿ ಬೆಂಬಲ ಹಾಗೂ ಕ್ರಾಂತಿಗೆ ಎದುರಾಗಿ ಪುನಾರಚನೆ ದಾಳವನ್ನೇ ಬಲವಾಗಿ ಪ್ರಯೋಗಿಸುವ ಲೆಕ್ಕಾಚಾರಗಳಿವೆ ಎನ್ನಲಾಗಿದೆ.
ಕೆಲವರಿಗೆ ರಾಜಶೇಖರ ಹಿಟ್ನಾಳ್ ಅವರ ಈ ಡಿನ್ನರ್ ಬಗ್ಗೆ ಇನ್ನೂ ಗೊತ್ತಾದಂತಿಲ್ಲ. ಕೆಲವರು ಗೊತ್ತಿದ್ದರೂ ಜಾಣ ನಡೆ ಅನುಸರಿಸ್ತಿದ್ದಾರೆ. ಬೆಂಗಳೂರಿನಲ್ಲಿ ಮಾತಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ದೆಹಲಿ ಡಿನ್ನರ್ ಬಗ್ಗೆ ಗೊತ್ತಿಲ್ಲ. ತಮ್ಮನ್ನು ಕರೆದಿಲ್ಲ. ತಾವು ಹೋಗಲ್ಲ ಎಂದರು.
ಒಟ್ಟಿನಲ್ಲಿ ದೆಹಲಿ ಡಿನ್ನರ್ ಸಭೆ ಕಾಂಗ್ರೆಸ್ ಒಳಗೆ ಸಂಚಲನ ಸೃಷ್ಟಿಸಿದೆ. ಅಲ್ಲಿ ಹೆಣೆಯುವ ರಾಜಕೀಯ ಪಟ್ಟುಗಳ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿದೆ.

