– ಮೋದಿಗೆ ಅಧಿಕಾರಿದ ಪಿತ್ತ ತಲೆಗೆ ಹತ್ತಿದೆ
ಮಂಡ್ಯ: ಗುಸು ಗುಸುನೂ ಇಲ್ಲ. ಪಸಪಸನೂ ಇಲ್ಲ, ನಾನು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸುತ್ತಿದ್ದೇನೆ ಎಂದು ಯಾರೋ ಹೇಳುತ್ತಿದ್ದಾರೆ. ಇದು ಸುಳ್ಳು, ಅವರಿಗೆ ಬೆಂಬಲ ನೀಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯ ಮಳುವಳ್ಳಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರದ ವೇಳೆ ಮಾತನಾಡಿದ ಮಾಜಿ ಸಿಎಂ, ನಾವು ಬಹಿರಂಗವಾಗಿಯೇ ನಿಖಿಲ್ ಅವರನ್ನು ಬೆಂಬಲಿಸುತ್ತಿದ್ದೇವೆ. ಯಾವುದೇ ಗುಸು ಗುಸು ಮಾತಿಗೆ ತಲೆಕೆಡಿಸಿಕೊಳ್ಳಬೇಡಿ ಎಂದರು. ಈ ವೇಳೆ ಎದ್ದು ನಿಂತ ಕಾರ್ಯಕರ್ತರೊಬ್ಬರು, ಮಾಧ್ಯಮದವರು ನಿಮ್ಮಲ್ಲೇ ಭಿನ್ನಪ್ರಾಯವಿದೆ ಎಂದು ತೋರಿಸುತ್ತಾರೆ. ನೀವು ಒಗ್ಗಟ್ಟಾಗಿ ಬನ್ನಿ. ಎಲ್ಲದಕ್ಕೂ ಮಾಧ್ಯಮದವರೇ ಕಾರಣ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ, ಮಾಧ್ಯಮದವರು ಸತ್ಯ ತೋರಿಸಿದರೆ ಸಾಕು. ನಮ್ಮ ಪರನೂ ಬೇಡ, ಅವರ ಪರವೂ ತೋರಿಸೋದು ಬೇಡ. ಜನ ಬುದ್ಧಿವಂತರಿದ್ದಾರೆ ಮಾಧ್ಯಮದಲ್ಲಿ ಬರೋದನ್ನ ನಂಬುವುದಿಲ್ಲ ಎಂದರು.
Advertisement
Advertisement
ನಾನು ಹಾಗೂ ಎಚ್.ಡಿ.ದೇವೇಗೌಡರು ಕಳೆದ 4 ದಿನಗಳಿಂದ ಮೈತ್ರಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಕೋಮುವಾದಿ ಬಿಜೆಪಿ ಸೋಲಿಸಲು ಜೆಡಿಎಸ್-ಕಾಂಗ್ರೆಸ್ ಒಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕಾರಿದ ಪಿತ್ತ ತಲೆಗೆ ಹತ್ತಿದೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಮಹಾಮೈತ್ರಿಯ ಬಗ್ಗೆ ಗೇಲಿ ಮಾಡುತ್ತಿದ್ದಾರೆ. ಮೋದಿ ಅವರು ಈಗಾಗಲೇ ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
ದೇಶದಲ್ಲಿ ಕಾಂಗ್ರೆಸ್ 50ರಿಂದ 60ವರ್ಷಗಳ ಕಾಲ ಅಧಿಕಾರ ನಡೆಸಿದೆ. ಯಾರು ಕೂಡ ಚುನಾವಣಾ ಸಂದರ್ಭದಲ್ಲಿ ವಿರೋಧ ಪಕ್ಷದ ಮುಖಂಡರ ಮನೆಯ ಮೇಲೆ ದಾಳಿ ನಡೆಸಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
Advertisement
ಐಟಿ ದಾಳಿ ಮಾಡಲಿ ನಮ್ಮದೇನು ತಕರಾರು ಇಲ್ಲ. ಆದರೆ ಬಿಜೆಪಿಯವರ ಮನೆ ಮೇಲೆ ಯಾಕೆ ದಾಳಿ ನಡೆಯುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಕೆ.ಎಸ್.ಈಶ್ವರಪ್ಪ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಬೇಕು. ಈ ಹಿಂದೆ ಕೆ.ಎಸ್.ಈಶ್ವರಪ್ಪ ಅವರ ಮನೆ ಮೇಲೆ ಐಟಿ ದಾಳಿ ನಡೆದಾಗ ನೋಟು ಏಣಿಸುವ ಮಿಷನ್ ಸಿಕ್ಕಿತ್ತು. ಅವರೆಲ್ಲಾ ದೊಡ್ಡ ಖದೀಮರು ಎಂದು ದೂರಿದರು.
ಬಿಜೆಪಿಯು ಮಂಡ್ಯದಲ್ಲಿ ಅಭ್ಯರ್ಥಿ ಹಾಕದೇ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದೆ. ಮೈಸೂರಿಗೆ ಮೊನ್ನೆ ಬಂದಿದ್ದ ಪ್ರಧಾನಿ ಮೋದಿ ಪಕ್ಷೇತರ ಅಭ್ಯರ್ಥಿಗೆ ಮತ ಹಾಕಿ ಎಂದಿದ್ದಾರೆ. ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಲ್ಲ, ಬಿಜೆಪಿ ಅಭ್ಯರ್ಥಿ ಎಂದು ಬಿಜೆಪಿಯವರು ಹೇಳುತ್ತಾರೆ. ಹೀಗಾಗಿ ಸುಮಲತಾ ಅಂಬರೀಶ್ ಅವರಿಗೆ ವೋಟ್ ಹಾಕಬೇಕಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಅನಂತ್‍ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ತಪ್ಪಿಸಿ ಆರ್ ಎಸ್‍ಎಸ್ ಹುಡುಗನಿಗೆ ಟಿಕೆಟ್ ನೀಡಲಾಗಿದೆ. ಅವನು ಸಂವಿಧಾನವನ್ನು ಬಿ.ಆರ್.ಅಂಬೇಡ್ಕರ್ ರಚಿಸಿದ್ದಾರೆ. ಹೀಗಾಗಿ ಅವರ ಪ್ರತಿಮೆ ಸುಟ್ಟು ಹಾಕಬೇಕು ಎಂದು ಹೇಳುತ್ತಾನೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅನುಮತಿ ಇಲ್ಲದೇ ಅವನು ಆ ರೀತಿ ಹೇಳಲು ಸಾಧ್ಯವೇ? ಅವನು ಸೂರ್ಯ ಅಲ್ಲ, ಅಮವಾಸ್ಯೆ ಎಂದು ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಹರಿಹಾಯ್ದರು.
ನಾನು ಇಂದಿರಾ ಕ್ಯಾಟೀನ್ ತೆರೆದೆ. ಪ್ರಧಾನಿ ಮೋದಿ ಮನ್ ಕೀ ಬಾತ್, ಮನ್ ಕೀ ಬಾತ್ ಅಂತಾರೆ. ಅದ್ಯಾವ ಬಾತೋ ಗೊತ್ತಿಲ್ಲ. ಕನಿಷ್ಠ ವಾಂಗಿ ಬಾತ್ ಆದ್ರೂ ಕೊಡೋ ಮಾರಾಯ ಅಂತ ಅವರಿಗೆ ಹೇಳಬೇಕು. ಬಿ.ಎಸ್.ಯಡಿಯೂರಪ್ಪ ಸಾಲಮನ್ನಾ ಮಾಡು ಅಂದ್ರೆ ನೋಟ್ ಪ್ರಿಂಟ್ ಮಾಡೋ ಯಂತ್ರ ಇಲ್ಲ ಅಂತ ಹೇಳುತ್ತಾರೆ ಎಂದು ಮಾಜಿ ಸಿಎಂ ವ್ಯಂಗ್ಯವಾಡಿದರು.
ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲ್ಲ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ. ಮೋದಿ ಅವರು ಅಧಿಕಾರದಲ್ಲಿ ಇದ್ದಾಗಲೇ ಪಂಚ ರಾಜ್ಯ ಚುನಾವಣೆಯಲ್ಲಿ ಸೋತಿದ್ದಾರೆ. ಕರ್ನಾಟಕದ ಉಪಚುನಾವಣೆಯಲ್ಲೂ ಲಕ್ಷಾಂತರ ಮತಗಳಿಂದ ಬಿಜೆಪಿ ಸೋತಿತ್ತು. ನಾನು ಕೂಡ ಎಲ್ಲಾ ಕಡೆ ಪ್ರಚಾರ ಮಾಡುತ್ತಿದ್ದೇನೆ. ಜನರ ಪ್ರತಿಕ್ರಿಯೆ ನೋಡಿದರೆ ರಾಜ್ಯದ 28 ಕ್ಷೇತ್ರದಲ್ಲೂ ನಾವು ಗೆದ್ದೆ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ ಎಂದರು.
ಮತದಾನದ ಹಿಂದಿನ ದಿನ ರಜೆ ಇದೆ. ರಜೆ ಇದೆ ಅಂತ ಎಲ್ಲಾದರು ಹೋಗಿಬಿಟ್ಟಿರಾ? ಮತಹಾಕಿ ಎಲ್ಲಾದರು ಹೋಗಿ, ಮೊದಲು ಮತಚಲಾಯಿಸಿ ಎಂದು ಮತದಾರರಿಗೆ ಮನವಿ ಮಾಡಿಕೊಂಡರು.